Political News: ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಇವಿಎಂ ತಿರುಚಲು ಸಾಧ್ಯವೆಂದು ಹೇಳಿರುವ ಹೇಳಿಕೆ ಕುರಿತು ಭಾರತದಲ್ಲಿ ಪರ-ವಿರೋಧಕ್ಕೆ ಕಾರಣವಾಗಿದೆ. ಮಸ್ಕ್ ಅವರ ಅಭಿಪ್ರಾಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಧನಿಗೂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ. ಶಿವಕುಮಾರ್, ಮಸುಕಾಗಿದ್ದ ಅನುಮಾನ ಈಗ ತೀಕ್ಷ್ಣವಾಗಿದೆ. ತಂತ್ರಜ್ಞಾನ ನಿಪುಣ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಎಲಾನ್ ಮಸ್ಕ್ ಅವರೇ ಇವಿಎಂಗಳ ಮೇಲೆ ವ್ಯಕ್ತಪಡಿಸಿರುವ ಅನುಮಾನವು ಭಾರತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಬಗ್ಗೆ ಆತಂಕ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್ ಅವರ ಹೇಳಿಕೆಗೂ ತಾಳೆಯಾಗುತ್ತಿದೆ. ಚುನಾವಣೆ ವ್ಯವಸ್ಥೆಯೇ ಪಾರದರ್ಶಕವಾಗಿರದಿದ್ದರೆ ಜನಾದೇಶ ಯಾರ ಕಡೆ ಇದೆ ಎಂದು ತಿಳಿಯುವುದಾದರೂ ಹೇಗೆ? ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಈಗ ಪ್ರಪಂಚಕ್ಕೇ ಅರ್ಥವಾಗಿದೆ. ಭಾರತಕ್ಕೂ ಆ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋರ್ಟೊರಿಕೋದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನೂರಾರು ಇವಿಎಂ ಮಷಿನ್‌ಗಳಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ಆದರೆ ಅದೃಷ್ಟವಶಾತ್ ಪೇಪರ್ ಟ್ರಯಲ್ ಇದ್ದ ಕಾರಣ ಅವುಗಳ ಮತ ಎಣಿಸಿ ಅಕ್ರಮ ಸರಿಪಡಿಸಲಾಗಿದೆ. ಇವಿಎಂಗಳನ್ನು ಹ್ಯಾಕ್ ಮಾಡುವ ಅವಕಾಶ ಮತ್ತು ಅವುಗಳ ಮಾಹಿತಿಯನ್ನು ತಿರುಚವ ಸಂಭವನೀಯ ಅವಕಾಶ ಇದ್ದೇ ಇದೆ. ಹೀಗಾಗಿ ಹಿಂದಿನಂತೆ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಮೊರೆ ಹೋಗುವುದು ಸೂಕ್ತ ಎಂದು ಎಲಾನ್ ಮಸ್ಕ್ ಹೇಳಿದ್ದರು.
ಮಸ್ಕ್ ಅವರ ಹೇಳಿಕೆ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುಗೇಟು ನೀಡಿದ್ದರು. ಇಂದಿನ ಡಿಜಿಟಲ್ ಯುಗದಲ್ಲಿ ಸುರಕ್ಷಿತವಾದ ಡಿಜಿಟಲ್ ಹಾರ್ಡ್‌ವೇರ್ ಅನ್ನು ಯಾರಿಂದಲೂ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯವಾದ ಹೇಳಿಕೆಯನ್ನು ಎಲಾನ್ ಮಸ್ಕ್ ನೀಡಿದ್ದಾರೆ. ಆದರೆ ಅದು ತಪ್ಪು. ಅಮೆರಿಕ, ಯುರೋಪ್‌ನಲ್ಲಿ ಆ ರೀತಿ ಆಗಬಹುದೇನೊ.. ಆದರೆ ನಮ್ಮಲ್ಲಿ ಅದು ಸಾಧ್ಯವಿಲ್ಲ. ಆ ದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕದ ಇವಿಎಂ ಅಭಿವೃದ್ಧಿಪಡಿಸುವುದಕ್ಕಾಗಿ ರೂಢಿಯಲ್ಲಿರುವ ಕಂಪ್ಯೂಟರ್ ವೇದಿಕೆಗಳನ್ನು ಬಳಸಲಾಗುತ್ತದೆ ಎಂದು ತಿರುಗೇಟು ನೀಡಿದ್ದರು.
ಇನ್ನೂ, ಎಲಾನ್ ಮಸ್ಕ್ ಅವರ ಅಭಿಪ್ರಾಯದ ಪರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬ್ಯಾಟಿಂಗ್ ಮಾಡಿದ್ದಾರೆ.
ʼಮಸುಕಾʼಗಿದ್ದ ಅನುಮಾನ ಈಗ ತೀಕ್ಷ್ಣ!
ತಂತ್ರಜ್ಞಾನ ನಿಪುಣ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಎಲಾನ್ ಮಸ್ಕ್ ಅವರೇ ಇವಿಎಂಗಳ ಮೇಲೆ ವ್ಯಕ್ತಪಡಿಸಿರುವ ಅನುಮಾನವು ಭಾರತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಬಗ್ಗೆ ಆತಂಕ ಮೂಡಿಸಿದೆ. ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್ ಅವರ ಹೇಳಿಕೆಗೂ ತಾಳೆಯಾಗುತ್ತಿದೆ.…
— DK Shivakumar (@DKShivakumar) June 17, 2024

