Chikkodi News: ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ, ಕೊಯ್ನಾ ಜಲಾಶಯದಿಂದ ಮತ್ತೆ ನೀರು ಬಿಡುಗಡೆ ಮಾಡಲಾಗಿದೆ. ನಿರಂತರ ಮಳೆಯಿಂದ ಕೃಷ್ಣಾ ನದಿ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸಧ್ಯ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೇಕ್ ಹೆಚ್ಚು ನೀರು ಹರಿದು ಬರುತ್ತಿದೆ.
ಕೊಯ್ನಾ ಜಲಾಶಯದಿಂದ ಅಧಿಕೃತವಾಗಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ 50 ಸಾವಿರ ಕ್ಯೂಸೇಕ್ ಕ್ಕಿಂತ ಹೆಚ್ಚು ನೀರು ಬಿಡುಗಡೆ ಮಾಡಲಿದ್ದಾರೆ. ಕೊಯ್ನಾ ಜಲಾಶಯದಿಂದ ಆರು ಗೇಟ್‌ಗಳಿಂದ ನೀರು ಬಿಡುಗಡೆ ಮಾಡುತ್ತಿದ್ದು, 105 ಟಿಎಂಸಿ ಸಾಮರ್ಥ್ಯ ಇರುವ ಕೊಯ್ನಾ ಜಲಾಶಯ 85 ಟಿಎಂಸಿ ಭರ್ತಿಯಾಗಿದೆ.
ಇನ್ನು ಕೊಯ್ನಾ ಜಲಾನಯನ ಹಾಗೂ ಮಹಾಬಲೇಶ್ವರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಇತ್ತ ಕೃಷ್ಣಾ ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ಒಳಹರುವು ಹೆಚ್ಚಳವಾಗಿದೆ. ಹಾಗಾಗಿ ಮತ್ತೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಮುಂದುವರೆದಿದ್ದು, ಪ್ರವಾಹದ ಆತಂಕ ಎದುರಾಗಿದೆ. ಹಾಗಾಗಿ ಸ್ಥಳೀಯ ಜನರಿಗೆ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ.