Sunday, December 22, 2024

Latest Posts

ಸೊರಗಿದ್ದ ಗಾಂಧಿನಗರಕ್ಕೆ ಗೋಲ್ಡ್ ಹೊಳಪು!!

- Advertisement -

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಹೌದು, ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ. ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರರಂಗದ ಸ್ಥಿತಿಗತಿ ಡೋಲಾಯಮಾನದಲ್ಲಿದೆ. ಹೀಗೆ ಅಂತೆ-ಕಂತೆಗಳ ಮಾತುಗಳೇ ಕೇಳಿ ಬರುತ್ತಿದ್ದವು. ನಿಜ, ಕನ್ನಡ ಚಿತ್ರರಂಗಕ್ಕೂ ಗರಬಡಿದಿತ್ತು. ಒಳ್ಳೆಯ ಸಿನಿಮಾ ಇಲ್ಲದೆ ನೋಡುಗನಿಗೂ ತೀವ್ರ ಬೇಸರವಾಗಿತ್ತು. ಆದರೆ, ಜನರೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಅನ್ನುವ ದೂರು ಮಾತ್ರ ನಿರಂತರವಾಗಿತ್ತು. ಆದರೆ, ಅದು ಸುಳ್ಳು. ಸಿನಿಮಾ ಪ್ರೇಮಿ ಯಾವತ್ತಿಗೂ ಒಳ್ಳೆಯ ಸಿನಿಮಾವನ್ನು ಬಿಟ್ಟುಕೊಟ್ಟಿಲ್ಲ. ನೋಡುಗನಿಗೆ ಒಳ್ಳೆಯ ಸಿನಿಮಾ ಬೇಕಿತ್ತು. ಅದನ್ನು ಎದುರು ನೋಡುತ್ತಿದ್ದ. ಈಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಪ್ರೇಕ್ಷಕನ ಸಿನಿಮಾ ದಾಹ ನೀಗಿಸಿದೆ.

ಯೆಸ್, ಕನ್ನಡ ಚಿತ್ರರಂಗದಲ್ಲೀಗ ಪರ್ವ ಕಾಲ. ಒಂದೆಡೆ ದುನಿಯಾ ವಿಜಯ್ ಅಭಿನಯದ ಭೀಮ ಒಂದು ಕಡೆ ವಿಜೃಂಭಿಸುತ್ತಿದ್ದರೆ, ಇನ್ನೊಂದು ಕಡೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಕೂಡ ರಾರಾಜಿಸುತ್ತಿದೆ. ಈ ಎರಡೂ ಸಿನಿಮಾಗಳು ದೊಡ್ಡ ಗೆಲುವು ಕೊಡುವುದರ ಮೂಲಕ ಗಾಂಧಿನಗರದಲ್ಲಿ ವಿಜಯ ಪತಾಕೆ ಹಾರಿಸಿವೆ.

ಸರಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ಗಾಳಿ ಎಬ್ಬಿಸಿದ್ದು ಮುಂಗಾರು ಮಳೆ ಮತ್ತು ದುನಿಯಾ ಚಿತ್ರಗಳು. ಆ ಸಿನಿಮಾಗಳ ಮೂಲಕ ಗಾಂಧಿನಗರದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದು ಇದೇ ಗಣೇಶ್ ಮತ್ತು ವಿಜಯ್. ಆಗ ಕನ್ನಡ ಚಿತ್ರರಂಗದಲ್ಲಿ ಅತೀವೃಷ್ಠಿ ಆಗಿದ್ದಂತೂ ಸುಳ್ಳಲ್ಲ ಬಿಡಿ. ಹಾಗಂತ, ಅದೇ ಸಕ್ಸಸ್ ರೇಷಿಯೋ ಕಾಪಾಡಿಕೊಳ್ಳಲು ಈ ಇಬ್ಬರು ಹೀರೋಗಳು ಒದ್ದಾಡಿದ್ದು ಮಾತ್ರ ಸುಳ್ಳಲ್ಲ. ಕಾಲ ಕ್ರಮೇಣ ಚಂದನವನ ಚೆನ್ನಾಗಿಯೇ ಇತ್ತು. ಅದು ಯಾರ ದೃಷ್ಠಿ ತಾಕಿತೋ ಏನೋ, ಕೊರೊನೊ ಸಂದರ್ಭದಲ್ಲಿ ತತ್ತರಿಸಿದ್ದ ಚಿತ್ರರಂಗ ಸುಧಾರಿಸಿಕೊಳ್ಳೋಕೆ ವರ್ಷಗಳೇ ಬೇಕಾಯ್ತು.

ಈ ಮಧ್ಯೆ ವರ್ಷಕ್ಕೆ ಇನ್ನೂರು ಪ್ಲಸ್ ಸಿನಿಮಾಗಳೂ ತೆರೆಗೆ ಬಂದರೂ, ಥಿಯೇಟರ್ ನಲ್ಲಿ ಗಟ್ಟಿಯಾಗಿ ನಿಲ್ಲೋಕೆ ಪರದಾಡುವಂತಹ ಸ್ಥಿತಿ ಇತ್ತು. ಕೋಟಿ ಕೋಟಿ ಹಣ ಸುರಿದ ನಿರ್ಮಾಪಕರು ಕೂಡ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸುಳ್ಳಲ್ಲ. ಇದರಿಂದ ಕನ್ನಡ ಚಿತ್ರರಂಗ ಸೊರಗಿ ಹೋಯ್ತ ಅನ್ನೋ ಅನುಮಾನ ಕೂಡ ಹರಡಿದ್ದು ನಿಜ.

ಆದರೆ, ಒಂದೇ ಒಂದು ಗೆಲುವಿಗಾಗಿ ಇಡೀ ಚಿತ್ರರಂಗ ಹಪಾಹಪಿಸುತ್ತಿತ್ತು. ಈ ಸಿನಿಮಾ ಹಿಟ್ ಆಗಬಹುದಾ? ಆ ಸಿನಿಮಾ ಗೆಲ್ಲಬಹುದಾ? ಎಂಬ ಆಸೆಕಂಗಳಲ್ಲೇ ದಿನ ಸವೆಸುತ್ತಿತ್ತು. ಕೊರೊನಾ ವೇಳೆ ಸೊರಗಿ ಕೂತಿದ್ದ ಚಿತ್ರರಂಗಕ್ಕೆ ಸಲಗ ಆನೆಬಲ ತಂದುಕೊಟ್ಟಿದ್ದು ಎಷ್ಟು ನಿಜಾನೋ, ಈಗ ಭೀಮ ಕೂಡ ಚಿತ್ರರಂಗಕ್ಕೆ ಭೀಮಬಲ ತಂದುಕೊಟ್ಟಿದ್ದು ಅಷ್ಟೇ ನಿಜ.

ಇನ್ನು, ಚಂದನವದ ಚಿನ್ನದ ಗಣಿ ಮೇಲೆ ಕೂಡ ಭರವಸೆ ಇತ್ತು. ಆ ಭರವಸೆ ನಿಜಕ್ಕೂ ಸುಳ್ಳಾಗಲಿಲ್ಲ. ಭೂಮಿ ಮೇಲಿನ ಗೋಲ್ಡ್ ರೇಟ್ ಏರಿಳಿಕೆ ಕಂಡಂತೆ, ಚಿತ್ರರಂಗದಲ್ಲೂ ಗಣೇಶ್ ನಟನೆಯ ಸಿನಿಮಾಗಳು ಕೂಡ ಗೆಲುವು-ಸೋಲಿನ ಲೆಕ್ಕಾಚಾರದಲ್ಲಿದ್ದವು. ಒಂದು ಸಕ್ಸಸ್ ಸಿನಿಮಾಗಾಗಿ ಎದುರು ನೋಡುತ್ತಿದ್ದವರಿಗೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಕಣ್ಮುಂದೆ ಬಂತು. ನಿಜಕ್ಕೂ ಆ ದಿನಗಳ ವೈಭವ ಕಣ್ಣೆದುರಿಗೆ ಕಾಣುತ್ತಿದೆ. ರಾಜ್ಯದ ಎಲ್ಲಾ ಥಿಯೇಟರ್ ಗಳ ಮುಂದೆ ಕಂಡ ಜನಜಂಗುಳಿ ಮನರಂಜನೆ ಯಾವತ್ತೂ ಸಾಯೋದಿಲ್ಲ ಅನ್ನುವುದನ್ನು ಸಾರಿ ಹೇಳಿದಂತಿತ್ತು.

ಪುನೀತ್ ರಾಜಕುಮಾರ್ ಅವರು ಪಕ್ಕಾ ಫ್ಯಾಮಿಲಿ ಹೀರೋ. ಅವರು ಮಾಸ್ ಮತ್ತು ಕ್ಲಾಸ್ ಹೀರೋ ಎನಿಸಿಕೊಂಡವರು. ಅವರ ಬಳಿಕ ಫ್ಯಾಮಿಲಿ ಆಡಿಯನ್ಸ್​ ಅನ್ನು ಥಿಯೇಟರ್ ಗೆ ಕರೆಸಿಕೊಳ್ಳುವ ತಾಕತ್ತು ಯಾರಿಗೆ ಇದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತಲೇ ಇತ್ತು. ಇದೀಗ ಗಣೇಶ್ ಅದನ್ನು ಸಾಬೀತುಪಡಿಸಿದ್ದಾರೆ. ಮೊದಲಿನಿಂದಲೂ ಫ್ಯಾಮಿಲಿ ಅಷ್ಟೇ ಅಲ್ಲ, ಅತೀ ಹೆಚ್ಚು ಹುಡುಗಿಯರೂ ಕೂಡ ಗಣಿ ಅವರ ಸಿನಿಮಾಗಳನ್ನು ಪ್ರೀತಿಯಿಂದ ಅಪ್ಪಿಕೊಂಡವರು. ಈಗ ಫ್ಯಾಮಿಲಿ ಆಡಿಯನ್ಸ್ ಗೂ ಹೆಚ್ಚು ಕನೆಕ್ಟ್ ಆಗುವ ನಟ ಅಂತ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಗಣೇಶ್.

ಇನ್ನು, ಈ ಮಾತು ಅತಿಶಯೋಕ್ತಿಯಲ್ಲ. ರಾಜ್ಯದ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳೂ ಕೃಷ್ಣಂ ಪ್ರಣಯ ಸಖಿ ಹೌಸ್ ಫುಲ್ ಅಂದರೆ ನಂಬಲೇಬೇಕು. ಅಷ್ಟೇ ಅಲ್ಲ, ಬ್ಲಾಕ್ ನಲ್ಲಿ ಟಿಕೆಟ್ ಓಡುತ್ತಿವೆ ಅನ್ನೋದು ಕೂಡ ಖುಷಿಯ ವಿಷಯವಲ್ಲದೆ ಮತ್ತೇನು? ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ ಎಂದು ದೂರುತ್ತಿದ್ದವರಿಗೆ ಇದೊಂದು ಅದ್ಭುತ ಚಿತ್ರವಾಗಿ ಹೊರಹೊಮ್ಮಿದೆ. ಕನ್ನಡದಲ್ಲಿ ಮತ್ತೆ ಗೆಲ್ಲುವ ಸಿನಿಮಾಗಳ ಓಟ ಶುರುವಾಗಿದೆ ಎಂಬುದಕ್ಕೆ ಈ ಸಿನಿಮಾಗಳು ಕಣ್ಣೆದುರಿಗಿನ ಸಾಕ್ಷಿ.

ಸದ್ಯದ ಮಟ್ಟಿಗೆ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಚೈತನ್ಯ ತಂದಿರೋದಂತೂ ಸತ್ಯ. ಯಾರು ಏನೇ ಅಂದುಕೊಂಡರೂ, ಗಣೇಶ್ ಈಗ ಪಕ್ಕಾ ಫ್ಯಾಮಿಲಿ ಆಡಿಯನ್ಸ್ ಹೀರೋ ಅನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಅದೇನೆ ಇರಲಿ, ಕನ್ನಡ ಚಿತ್ರರಂಗ ಈಗ ಗೆಲುವಿನ ನಗೆ ಬೀರಿದೆ. ಅದೇ ಮೂಡ್ ನಲ್ಲಿ ಒಂದಷ್ಟು ಸಿನಿಮಾಗಳು ನೋಡುಗರನ್ನು ಗೆಲ್ಲೋದ್ದಕ್ಕೆ ಬರಲು ಸಜ್ಜಾಗಿವೆ. ಇದು ಬರೀ ಟ್ರೇಲರ್ ಅಷ್ಟೇ…. ಮುಂದೆ ಇನ್ನೂ ಸಾಲು ಸಾಲು ನಿರೀಕ್ಷೆಯ ಸಿನಿಮಾಗಳಿವೆ. ಅವೆಲ್ಲವೂ ಕನ್ನಡ ಚಿತ್ರರಂಗದ ಹೊಸ ಮಜಲಿಗೆ ಸಾಕ್ಷಿಯಾಗುವುದಂತೂ ನಿಜ.

-ವಿಜಯ್ ಭರಮಸಾಗರ

- Advertisement -

Latest Posts

Don't Miss