Raichuru: ಒಂದು ಕಡೆ ತಿರುಪತಿಯ ಲಡ್ಡು ಅಪವಿತ್ರ ಎಂಬ ಹಣೆಪಟ್ಟು ಪಡೆದಿದೆ. ಮತ್ತೊಂದೆಡೆ ಇಂಥದ್ದೊಂದು ಘಟನೆ ನಂತರವೂ ತಿರುಪತಿಯಲ್ಲಿ ಲಡ್ಡುಗೆ ಬೇಡಿಕೆ ಮಾತ್ರ ಕುಂದಿಲ್ಲ! ಹೌದು, ತಿರುಪತಿಯ ಲಡ್ಡು ಬಾಯಿಗೆ ಬಂದು ಬಿದ್ದಾಗ ಆ ಕ್ಷಣ ಒಂದು ರೀತಿ ಪರಮಾನಂದ!.
ಆದರೆ, ಯಾವಾಗ, ತಿರುಪತಿ ಲಡ್ಡುಗೆ ಬೆರೆಸುವ ತುಪ್ಪದಲ್ಲಿ ದನ, ಹಂದಿ ಕೊಬ್ಬು ಮತ್ತು ಮೀನಿನ ಎಣ್ಣೆ ಬೆರೆಕೆಯಾಗಿದೆ ಎಂಬ ಸತ್ಯ ಹೊರಬಿತ್ತೋ, ಅದೆಷ್ಟೋ ಕೋಟಿ ಕೋಟಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದ್ದು ಸುಳ್ಳಲ್ಲ. ನಿಜಕ್ಕೂ ಅದು ಹಿಂದೂ ಭಕ್ತರಿಗಂತೂ ಆಘಾತವೇ ಸರಿ. ಇದರ ನಡುವೆಯೂ ಕೂಡ ಲಡ್ಡು ವಿಷಯದಲ್ಲಿ ಆದಂತಹ ಅಪಚಾರಕ್ಕೆ ಹೋಮ ಹವನ ಮೂಲಕ ಆಗಿರುವ ಪಾಪ ಪರಿಹರಿಸಲು ಅಲ್ಲಿನ ಆಡಳಿತ ಸಂಸ್ಥೆ ಮುಂದಾಗಿರೋದು ಗೊತ್ತೇ ಇದೆ. ಹೋಮ-ಹವನಕ್ಕೆ ಸಾಕಷ್ಟು ವಿರೋಧಗಳೂ ಬಂದಿವೆ. ಈ ವಿಷಯ ಸದ್ಯ ಪಕ್ಕಕ್ಕಿಡೋಣ.
ಇವೆಲ್ಲದರ ನಡುವೆಯೂ ಇದೀಗ ಮಠಮಾನ್ಯಗಳು, ದೇವಾಲಯಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನೆಲ್ಲ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂಬ ಕೂಗು ಕೇಳಿಬರುತ್ತಿದೆ ಅನ್ನೋದು ಈ ಹೊತ್ತಿನ ಸುದ್ದಿ. ಹೌದು, ಈ ಕುರಿತಂತೆ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಆಗಿರುವಂತಹ ಸುಬುಧೇಂದ್ರ ತೀರ್ಥ ಸ್ವಾಮಿಗಳು ಒತ್ತಾಯ ಮಾಡಿದ್ದಾರೆ.
ರಾಷ್ಟ್ರಧರ್ಮ ಪಾಲನಾ ಸಮಿತಿ ರಚನೆ ವಿಷಯಕ್ಕೆ ಸಂಬಂಧಿಸಿದಂತೆ ಮಂತ್ರಾಲಯ ಶ್ರೀಗಳು, ಸ್ವಾತಂತ್ರ್ಯ ಪೂರ್ವದಲ್ಲಿ ಆಯಾ ದೇವಸ್ಥಾನ, ಮಠಗಳ ಆಯಾ ಶಿಷ್ಯರು, ಭಕ್ತರ, ಸಮುದಾಯ ಮುಖಂಡರ ನೇತೃತ್ವದಲ್ಲಿ ನಿರ್ವಹಣೆ, ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು. ಈಗ ಲೌಕಿಕ ಕಾನೂನುಗಳಿಂದ ಇದೆಲ್ಲಾ ಸರ್ಕಾರದ ವಶದಲ್ಲಿವೆ. ಈಗ ತಿರುಪತಿ ಲಡ್ಡು ಪ್ರಕರಣದಂತ ತೊಂದರೆಗಳು ಕೂಡ ಆಗುತ್ತಿರುವ ಬಗ್ಗೆ ಶ್ರೀಗಳು ಬೇಸರ ಹೊರಹಾಕಿದ್ದಾರೆ.
ಆಯಾ ಕಟ್ಟಿನ ಮಠ, ದೇವಾಲಯಗಳು ಅಲ್ಲಿನ ಜನರ ನೇತೃತ್ವದಲ್ಲೆ ನಡೆಯಬೇಕು. ಇದಕ್ಕೆ ಸನಾತನ ಧರ್ಮ ಪರಿರಕ್ಷಣ ಸಂಬಂಧ ಯೋಜನೆಗೆ ನಮ್ಮ ಬೆಂಬಲವಿದೆ. ನಮ್ಮ ಊರಿನ ಆಚಾರ-ಸಂಪ್ರದಾಯ ಬಗ್ಗೆ ಬೇರೆ ಯಾರೋ ಬಂದು ಹೇಳುವುದಲ್ಲಾ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ವಿದ್ವಾಂಸರು, ಮಠಾಧೀಶರ ನೇತೃತ್ವದಲ್ಲಿ ನಡೆಯಬೇಕು ಆಗ ಮಾತ್ರ ಎಲ್ಲವೂ ಕ್ಷೇಮವಾಗಿರುತ್ತೆ ಎಂದಿರುವ ಅವರು, ಮುಜರಾಯಿ ಇಲಾಖೆಯಿಂದ ಮಠ ಮಾನ್ಯಗಳು, ದೇವಾಲಯ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮುಕ್ತವಾಗಬೇಕು ಅಂತ ಅವರು ಒತ್ತಾಯಿಸಿದ್ದಾರೆ.
ಲಡ್ಡು ಬೇಡಿಕೆ ಕುಸಿದಿಲ್ಲ!
ಅದೆಲ್ಲವೂ ಸರಿ, ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ ಹೆಚ್ಚಿದೆ ಅನ್ನೋದನ್ನು ನಂಬಲೇಬೇಕು. ಹೌದು, ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟವಾಗಿದೆ ಅನ್ನೋದು ಅಚ್ಚರಿಯಾದರೂ ಸತ್ಯ. ತಿರುಪತಿ ಲಡ್ಡುಗೆ ದನ, ಹಂದಿ ಕೊಬ್ಬು ಬೆರಕೆ ಹಿನ್ನೆಲೆಯಲ್ಲಿ ಲಡ್ಡು ಪ್ರಸಾದಕ್ಕೆ ಬೇಡಿಕೆ ಕುಸಿಯುತ್ತೆ ಎಂದೇ ಹೇಳಲಾಗುತ್ತಿತ್ತು. ನಿಜ ಹೇಳುವುದಾದರೆ, ಅಂಥದ್ದೇನೂ ಆಗಿಲ್ಲ! ಈ ಯಾವ ಆರೋಪ ಕೂಡ ತಿರುಪತಿಗೆ ಬರುವ ಭಕ್ತರ ಮೇಲೆ ಎಳ್ಳಷ್ಟೂ ಪರಿಣಾಮ ಬೀರಿಲ್ಲ. ಕಳಂಕ ರಹಿತ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ.
ಲಡ್ಡು ತಯಾರಿಕೆಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪದ ಮಧ್ಯೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮಪವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ. ಈ ನಡುವೆ, ಅಪಚಾರ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯದಲ್ಲಿ ಮಹಾಶಾಂತಿ ಹೋಮ ನಡೆಸಲಾಗಿದೆ. ದೇವಾಲಯದಲ್ಲಿ ಸೇವೆಗಳಿಗೆ ಭಂಗ ಬರದಂತೆ ಯಾಗಗಳನ್ನೂ ನಡೆಸಲಾಗಿದೆ. ಇದಷ್ಟೇ ಅಲ್ಲ, ಡಿಸಿಎಂ ಪವನ್ ಕಲ್ಯಾಣ್ ಆಗಿರುವ ಅಪಚಾರಕ್ಕೆ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. 11 ದಿನಗಳ ಕಾಲ ಈ ಪ್ರಾಯಶ್ಚಿತ ದೀಕ್ಷೆ ಮುಂದುವರಿಯಲಿದೆ.