ಜನ ಹಿತ ಕಾಯುವಲ್ಲಿ ಸೋತಿರುವ ಸರ್ಕಾರಕ್ಕೆ ಜನರ ಶಾಪ ತಟ್ಟದೇ ಇರಲಾರದು: ಬಿ.ವೈ.ವಿಜಯೇಂದ್ರ

Political News: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿದ್ದು ಸತತವಾಗಿ ಎಲ್ಲದರ ದರ ಏರಿಕೆಯಿಂದಾಗಿ ಸಾಮಾನ್ಯ ಜನ ಬೇಸತ್ತು ಹೋಗಿದ್ದಾರೆ. ಹೀಗೆ ಪದೇ ಪದೇ ಎಲ್ಲದರ ಬೆಲೆ ಏರಿಕೆಯಾದರೆ, ನಾವು ಜೀವನ ಮಾಡೋದಾದ್ರೂ ಹೇಗೆ ಅಂತಾ ಪ್ರಶ್ನಿಸುತ್ತಿದ್ದಾರೆ.

ಇನ್ನು ಬೆಸ್ಕಾಂ, ಸೆಸ್ಕ್ಂ ಅವರ ಈ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದು, ರಾಜ್ಯದ ಆರ್ಥಿಕತೆ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮವಾಗಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಅಸಲಿಯತ್ತನ್ನು ಅವರದ್ದೇ ಸರ್ಕಾರ ಬಯಲುಮಾಡಿದೆ. ಬಡವರ ಮತ್ತು ಮಧ್ಯಮ ವರ್ಗದವರಿಗೆ ವಿದ್ಯುತ್ ಬೆಲೆ ಏರಿಕೆಯ ಶಾಕ್ ನೀಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ 15 ಪೈಸೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಮೇಲೆ ತನ್ನ ಆರ್ಥಿಕ ಅಸಾಮರ್ಥ್ಯದ ಹೊರೆಯನ್ನು ಜನರ ಮೇಲೆ ಮತ್ತೆ ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಅಸಮರ್ಪಕ ಆಡಳಿತ ಮತ್ತು ಆರ್ಥಿಕ ಶಿಸ್ತಿನ ಕೊರತೆಯಿಂದ ಉಂಟಾದ ನಷ್ಟವನ್ನು ಜನರ ಮೇಲೆ ಹೇರುತ್ತಿರುವುದು ಖಂಡನೀಯ. ಒಂದು ಕೈಯಿಂದ ಗ್ಯಾರಂಟಿ, ಉಚಿತ ಎಂದು ಹೇಳುವುದು, ಇನ್ನೊಂದು ಕೈಯಿಂದ ಜನರ, ಬಡವರ, ಹಣವನ್ನು ಲೂಟಿ ಮಾಡುತ್ತಿರುವುದು ಈ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ! ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಮತ್ತೊಮ್ಮೆ ಈ ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ.

ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದಲ್ಲದೆ, ಈಗ ರೈತರ ಮತ್ತು ಶ್ರಮಿಕರ ಮೇಲೆ ‘ಪವರ್ ಶಾಕ್’ ನೀಡುತ್ತಿರುವುದು ಈ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಕೂಡಲೇ ಈ ಜನವಿರೋಧಿ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ. ಜನರ ಹಿತ ಕಾಯುವಲ್ಲಿ ಸೋತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಜನರ ಶಾಪ ತಟ್ಟದೆ ಇರದು ಎಂದು ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ.

About The Author