ಹುಟ್ಟು ಸಹಜ, ಸಾವು ಖಚಿತ. ಹುಟ್ಟಿದ ಮನುಷ್ಯನಿಗೆ ಸಾವು ಎಲ್ಲಿ, ಹೇಗೆ, ಯಾವ ರೀತಿ ಬರುತ್ತೆ ಅನ್ನೋದು ಯಾರಿಗೂ ತಿಳಿದಿಲ್ಲ. ವಿದ್ಯುತ್ ಹೈಟೆನ್ಷನ್ ವೈರ್ ಮೇಲೆ ಬಿದ್ದಿದ್ದ ಬೈಕ್ ಕೀಯನ್ನು ತೆಗೆಯಲು ಹೋಗಿದ್ದ ವ್ಯಕ್ತಿಗೆ ವಿದ್ಯುತ್ ಶಾಕ್ ಹೊಡೆದು ಮನೆಯ ಬಾಗಿಲಲ್ಲಿ ಮೃತಪಟ್ಟಿರುವ ಘಟನೆ ಹಾಸನದ ಕುವೆಂಪುನಗರದಲ್ಲಿ ನಿನ್ನೆ ಸಂಜೆ ನಡೆದಿದೆ. ಕಿರಿಯ ನರ್ಸಿಂಗ್ ಅಧಿಕಾರಿ ಮಲ್ಲಪ್ಪ (58) ಮೃತ ದುರ್ದೈವಿ. ಮಲ್ಲಪ್ಪ ನಿಧನಕ್ಕೆ ಹಿಮ್ಸ್ ಆಸ್ಪತ್ರೆಯ ಇಡೀ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.
ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ 28 ವರ್ಷಗಳಿಂದ ಕಿರಿಯ ನರ್ಸಿಂಗ್ ಅಧಿಕಾರಿಯಾಗಿದ್ದ ಮಲ್ಲಪ್ಪ ಸರಳ ಹಾಗೂ ಸ್ನೇಹಿ ಜೀವಿಯಾಗಿದ್ದರು. ಪ್ರತಿಯೊಬ್ಬರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆಸ್ಪತ್ರೆಯ ಸಿಬ್ಬಂದಿಗೂ ಮಲ್ಲಪ್ಪ ಎಂದರೆ ಎಲ್ಲಿಲ್ಲದ ಗೌರವ, ಪ್ರೀತಿ. ಆಸ್ಪತ್ರೆಯ ಸಿಬ್ಬಂದಿಯನ್ನು ಎಂದಿಗೂ ಅಗೌರವದಿಂದ ಕಂಡವರಲ್ಲ. ಯಾರೊಂದಿಗೂ ಜಗಳ ಆಡಿದವರಲ್ಲ. ಮಲ್ಲಪ್ಪ ಪತ್ನಿ ಕೂಡ ಹಿಮ್ಸ್ ಆಸ್ಪತ್ರೆಯಲ್ಲಿ ಸೀನಿಯರ್ ನರ್ಸ್ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದರು. ಮಲ್ಲಪ್ಪ ಅವರಿಗೆ ಮೂರು ಮಕ್ಕಳಿದ್ದು ಇತ್ತೀಚಿಗೆ ಓರ್ವ ಮಗಳನ್ನು ವಿವಾಹ ಮಾಡಿದ್ದರು.
ಪ್ರೀತಂಗೌಡ ಹೊಂದಿರುವ ಸಂಸ್ಕೃತಿ ಇದೇನಾ..?: ಎಚ್.ಪಿ. ಸ್ವರೂಪ್ ಕಿಡಿ..
ಧಾರವಾಡ ಮೂಲದ ಮಲ್ಲಪ್ಪ ಹಾಸನದ ಕುವೆಂಪುನಗರದ ಎರಡನೇ ಕ್ರಾಸ್‌ನಲ್ಲಿರುವ ಬಾಡಿಗೆ ಮನೆಯ ಎರಡನೇ ಅಂತಸ್ತಿನಲ್ಲಿ ಮಲ್ಲಪ್ಪ ಕುಟುಂಬ ವಾಸವಿತ್ತು. ಸೋಮವಾರ ಸಂಜೆ ಮಲ್ಲಪ್ಪ ಪುತ್ರ ಸಂಗಮೇಶ್ ಕೆಳಗೆ ರಸ್ತೆಯಲ್ಲಿ ನಿಂತು ಬೈಕ್ ಕೀ ಎಸೆಯುವಂತೆ ತಂದೆಯನ್ನು ಕರೆದಿದ್ದಾನೆ. ಬೈಕ್ ಕೀಯನ್ನು ಮಗನಿಗೆ ಎಸೆಯುವ ವೇಳೆ ಕೈತಪ್ಪಿ ಮನೆಯ ಮುಂದೆ ಹಾದು ಹೋಗಿದ್ದ 11 ಕೆವಿ ವಿದ್ಯುತ್ ವೈರ್ ಮೇಲೆ ಬಿದ್ದಿದ್ದು, ವಿದ್ಯುತ್ ತಂತಿಯ ಮೇಲೆ ಕೀ ಸಿಲುಕಿಕೊಂಡಿದೆ.
ಈ ವೇಳೆ ಸಂಗಮೇಶ್ ಇನ್ನೊಂದು ಕೀ ಇದೆ ತಂತಿ ಮೇಲೆ ಸಿಲುಕಿರುವ ಕೀಯನ್ನು ತೆಗೆಯಬೇಡಿ ಎಂದು ಹೇಳಿ ಹೋಗಿದ್ದಾರೆ. ಮಂಗಳವಾರ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಮಲ್ಲಪ್ಪ ವೈರ್ ಮೇಲೆ ಸಿಲುಕಿದ್ದ ಕೀಯನ್ನು ತೆಗೆಯಲು ಮುಂದಾಗಿದ್ದಾರೆ. ಕೈಗೆ ಬಟ್ಟೆ ಸುತ್ತಿಕೊಂಡು ಪ್ಲಾಸ್ಟಿಕ್ ಪೈಪ್ ಎಂದು ತಿಳಿದು ತಗಡಿನ ಪೈಪ್ ಹಿಡಿದು ಕೀ ತೆಗೆಯಲು ವೈಯರ್ ಮುಟ್ಟಿದಾಗ ಶಾಕ್ ಹೊಡೆದಿದೆ. ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಲ್ಲಪ್ಪ ನಿಧನಕ್ಕೆ ಹಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಇಂದು ಮಧ್ಯಾಹ್ನ ಆಸ್ಪತ್ರೆಯ ಮುಂದೆ ಮಲ್ಲಪ್ಪ ಶವವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮೇಲಧಿಕಾರಿಗಳು ಸೇರಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಮಲ್ಲಪ್ಪ ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು. ಇತ್ತ ಮಲ್ಲಪ್ಪ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಂಬ್ಯುಲೆನ್ಸ್‌ನಲ್ಲಿ ಮಲ್ಲಪ್ಪ ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಯಿತು.
ಒಟ್ಟಿನಲ್ಲಿ ಒಂದು ಬೈಕ್ ಕೀ ಒಬ್ಬರ ಪ್ರಾಣವನ್ನೇ ತೆಗೆದಿದೆ. ನಗರಗಳಲ್ಲಿ ಬಹುತೇಕ ಕಡೆ ಮನೆಗಳ ಮುಂದೆ ಕೈಗೆ ಎಟುಕುವಂತೆ ವಿದ್ಯುತ್ ವೈರ್‌ಗಳಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.