ಚೀಪ್ ಪಾಪ್ಯುಲಾರಿಟಿಗಾಗಿ ಕಾರ್ಯಕ್ರಮ ಮಾಡಿರೋ ಸಿಎಂ, ಡಿಸಿಎಂ ವಿರುದ್ಧ ಕ್ರಮವಾಗಲಿ : ಹರತಾಳ್ ವಾಗ್ದಾಳಿ

Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಸಂಕಷ್ಟವನ್ನು ತಂದಿಡುತ್ತಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಕೂಡಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಸರ್ಕಾರದ ಬೇಜವಾಬ್ದಾರಿ ನಡೆ, ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳ ವೈಫಲ್ಯದ ವಿರುದ್ಧ ರಾಜ್ಯಾದ್ಯಂತ ಆಕ್ರೋಶದ ಅಲೆ ಜೋರಾಗಿದೆ.

ಈ ತಪ್ಪಿನಿಂದ ಸಿಎಂ, ಡಿಸಿಎಂ ವಿರುದ್ಧ ಮೊದಲು ಕ್ರಮವಾಗಲಿ..

ಇನ್ನೂ ಇದೇ ವಿಚಾರಕ್ಕೆ ಸರ್ಕಾರದ ನಡೆಯನ್ನು ಖಂಡಿಸಿರುವ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತ ದುರಂತದ ವಿಚಾರದಲ್ಲಿ ತನ್ನ ತಪ್ಪಿನಿಂದ ಸರ್ಕಾರ ನುಣುಚಿಕೊಳ್ಳಲು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ. ಈ ದುರಂತ ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ. ಮೊದಲು ಸಿಎಂ, ಡಿಸಿಎಂ ವಿರುದ್ಧ ಕ್ರಮವಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.

ಇದು ಪ್ರಚಾರದ ಗೀಳಿಗೆ ಬಿದ್ದ ಸರ್ಕಾರಿ ಪ್ರಾಯೋಜಿತ ಕೊಲೆ..

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ಗೆಲುವನ್ನು ಸಂಭ್ರಮಿಸುವ ವೇಳೆ ನಡೆದ ಕಾಲ್ತುಳಿತದಿಂದ 11 ಜನ ಅಭಿಮಾನಿಗಳು ಹತರಾಗಿರುವ ಹೃದಯವಿದ್ರಾವಕ ಘಟನೆ ನಾಡಿನ ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ. ಪೊಲೀಸರು ಘಟನೆ ನಡೆದ ದಿನ ಸುರಕ್ಷತಾ ದೃಷ್ಟಿಯಿಂದ ಸಂಭ್ರಮಾಚರಣೆ ಬೇಡ ಎಂದರೂ ಪ್ರಚಾರದ ಗೀಳಿಗೆ ಬಿದ್ದ ಸರ್ಕಾರ ಸಂಭ್ರಮಾಚರಣೆ ನಡೆಸಿದ್ದು, ಇದು ಸರ್ಕಾರಿ ಪ್ರಾಯೋಗಿತ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಾಮಾಣಿಕ ಅಧಿಕಾರಿಗಳ ಅಮಾನತು ಖಂಡನೀಯ..!

ಪೊಲೀಸರ ಮಾತನ್ನು ಕಡೆಗಣಿಸಿರುವ ಸರ್ಕಾರ ಈಗ ಅಧಿಕಾರಿಗಳ ತಲೆದಂಡ ಮಾಡುವುದರ ಮೂಲಕ ತನ್ನ ಜವಾಬ್ದಾರಿಯಿಂದ ನುಣಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕಮಿಷನರ್ ದಯಾನಂದ್ ಬಹಳ ದಕ್ಷತೆಗೆ ಹೆಸರುವಾಸಿಯಾದವರು. ಡಿಸಿಪಿ ಶೇಖರ್ ಈ ಹಿಂದೆ ಶಿವಮೊಗ್ಗದ ಎಸ್ಪಿ ಆಗಿ ಕಾರ್ಯನಿರ್ವಹಿಸಿದ ಬಹಳ ದಕ್ಷ ಅಧಿಕಾರಿ. ಈಗಿನ ಕಾಲದಲ್ಲಿ ಇಂತಹ ಪ್ರಾಮಾಣಿಕ ಅಧಿಕಾರಿ ಸಿಗುವುದು ಬಹಳ ವಿರಳ. ಆಡಿಷನಲ್ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ನನ್ನ ಜೊತೆ ಎಂಎಸ್ಐಎಲ್ ನಲ್ಲಿ ಎಂಡಿ ಆಗಿ ಕಾರ್ಯನಿರ್ವಹಿಸಿದ್ದವರು. ಇವರೂ ಬಹಳ ಪ್ರಾಮಾಣಿಕರು ಹಾಗೂ ದಕ್ಷ ಅಧಿಕಾರಿ. ಇಂತಹ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಖಂಡನಿಯ ಎನ್ನುವ ಮೂಲಕ ಹರತಾಳು ಅಧಿಕಾರಿಗಳ ಪರ ಬ್ಯಾಟ್ ಬೀಸಿದ್ದಾರೆ.

ಚೀಪ್ ಪಾಪ್ಯುಲಾರಿಟಿಗಾಗಿ ಕಾರ್ಯಕ್ರಮ ಮಾಡಿದವರ ಮೇಲೆ ಕ್ರಮವಾಗಲಿ..

ಸರ್ಕಾರ ಈ ಎಲ್ಲಾ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಆದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕು. ಕ್ರಮ ಆಗಬೇಕಾಗಿದ್ದು ಅಧಿಕಾರಿಗಳ ಮೇಲಲ್ಲ. ವಿವೇಕರಹಿತವಾಗಿ, ಅವಿವೇಕತನದಿಂದ ಚೀಪ್ ಪಾಪ್ಯುಲಾರಿಟಿಗಾಗಿ ಕಾರ್ಯಕ್ರಮ ಮಾಡಿದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಮೇಲೆ ಕ್ರಮ ಆಗಬೇಕಾಗಿದೆ. ಅಂದರೆ ಮೊದಲು ಈ ಇಬ್ಬರು ತೊಲಗಬೇಕು. ಅಧಿಕಾರಿಗಳ ಅಮಾನತು ವಾಪಾಸು ಪಡೆಯದಿದ್ದರೆ ನಾಡಿನ ಜನರೇ ಸಿಎಂ, ಡಿಸಿಎಂ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರತಾಳು ಹಾಲಪ್ಪ ತಮ್ಮ ಹೇಳಿಕೆಯಲ್ಲಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

About The Author