Political News: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವವನ್ನು ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಸಂಭ್ರಮಕ್ಕೂ ಮೊದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತ ದುರಂತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿರುವ ಘಟನೆಗೆ ದೇಶದೆದುರೆ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ.
ದಿನಕಳೆದಂತೆ ಸಂಕಷ್ಟಕ್ಕೆ ಸಿಲುಕುತ್ತಿರೋ ರಾಜ್ಯ ಸರ್ಕಾರ..
ಇನ್ನೂ ಈ ಘಟನೆಯು ಇದೀಗ ರಾಜ್ಯ ಸರ್ಕಾರದ ಬುಡವನ್ನೇ ಅಲ್ಲಾಡಿಸುವ ಹಂತವನ್ನು ತಲುಪುತ್ತಿದೆ. ದಿನ ಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಪ್ರಕರಣವು ವಿಪಕ್ಷಗಳಿಗೂ ಸಾಕಷ್ಟು ಆಹಾರವಾಗಿದ್ದು, ಭರ್ಜರಿಯಾಗಿ ಕೆಸರೆರಚಾಟ ನಡೆಯುತ್ತಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜಪಿ ಹಾಗೂ ಜೆಡಿಎಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಸರ್ಕಾರ ತಮ್ಮ ತಪ್ಪಿನಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಕೆಲಸ ಮಾಡಿದ್ದು, ಇದರಿಂದ ಸರ್ಕಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಕರ್ತವ್ಯ ಲೋಪದಲ್ಲಿ ಅಧಿಕಾರಿಗಳ ಸಸ್ಪೆಂಡ್, ಸರ್ಕಾರದ ನಡೆಗೆ ಆಕ್ರೋಶ..!
ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ತಲೆದಂಡವಾಗಿದ್ದು, ಅಲ್ಲದೆ ಇತರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರಕ್ಕೆ ನೀಡದೆ ವೈಫಲ್ಯಕ್ಕೆ ಕಾರಣವಾಗಿರುವ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರಿಗೆ ಸ್ಥಳ ತೋರಿಸದೆಯೇ ವರ್ಗಾವಣೆಯ ಶಿಕ್ಷೆಯನ್ನು ನೀಡುವ ಮೂಲಕ ರಾಜ್ಯದ ಜನರ ವಿಶ್ವಾಸಾರ್ಹತೆಯನ್ನು ಗಳಿಸುವ ಹೆಣಗಾಟಕ್ಕೆ ಸರ್ಕಾರ ಬಿದ್ದಂತಾಗಿದೆ. ಇದರಿಂದ ರಾಜ್ಯದಲ್ಲಿ ಆಕ್ರೋಶ ಹೆಚ್ಚಾಗಿದೆ.
ಆದರೆ ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜು ಅವರನ್ನು ಸ್ಥಾನದಿಂದ ಕಿತ್ತು ಹಾಕುವ ಮೂಲಕ ರಾಜ್ಯ ಸರ್ಕಾರ ಸೇಫ್ ಗೇಮ್ ಶುರು ಮಾಡಿದೆ. ಇನ್ನೂ ಈ ಎಲ್ಲ ಬೆಳವಣಿಗೆಗಳ ನಡುವೆಯೇ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕೆಎಸ್ಸಿಎನಲ್ಲೂ ರಾಜೀನಾಮೆ ಪರ್ವ ಮುಂದುವರೆದಿದ್ದು ಕಾರ್ಯದರ್ಶಿ ಸ್ಥಾನಕ್ಕೆ ಶಂಕರ್ ಘಟನೆಯ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಕೆಎಸ್ಸಿಎ ಖಜಾಂಚಿ ಜೈರಾಮ್ ಸಹ ರಾಜೀನಾಮೆ ನೀಡಿದ್ದು, ಕೆಎಸ್ಸಿಎ ಅಧ್ಯಕ್ಷರಿಗೆ ಇಬ್ಬರೂ ರಾತ್ರಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಘಟನೆಯ ನೈತಿಕ ಹೊಣೆ ಹೊತ್ತು ಇಬ್ಬರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ..!
ಈ ಘಟನೆಯ ಬಗ್ಗೆ ಕೆಎಸ್ಸಿಎ ಆಡಳಿತ ಮಂಡಳಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆಳವಣಿಗೆಯಿಂದ ಶಂಕರ್ ಹಾಗೂ ಜೈರಾಮ್ ವಿರುದ್ಧ ಆಡಳಿತ ಮಂಡಳಿಯಲ್ಲಿ ತೀವ್ರ ಆಕ್ರೋಶ ಹಾಗೂ ಕೋಲಾಹಲ ಸೃಷ್ಟಿಯಾಗಿತ್ತು. ತಮ್ಮ ಸ್ಥಾನಕ್ಕೆ ಇಬ್ಬರೂ ರಾಜೀನಾಮೆ ನೀಡಬೇಕೆಂದು ಒತ್ತಡಗಳು ಬಂದಿದ್ದವು. ಅಂತಿಮವಾಗಿ ಘಟನೆಯ ಹೊಣೆ ಹೊತ್ತು ಅವರು ಅಸೋಸಿಯೇಷನ್ನಿಂದ ಹೊರ ನಡೆದಿದ್ದಾರೆ.
ದಾಖಲಾಗಿರುವ ಎಫ್ಐಆರ್ ರದ್ದು ಪಡಿಸುವಂತೆ ಹೈಕೋರ್ಟ್ಗೆ ಕೆಎಸ್ಸಿಎ ಮನವಿ ಮಾಡಿತ್ತು. ಬಳಿಕ ಅರ್ಜಿ ಆಲಿಸಿದ ಕೋರ್ಟ್ ತಕ್ಷಣಕ್ಕೆ ಹಾಗೂ ಬಲವಂತದ ಬಂಧನ ಬೇಡವೆಂದು ಹೇಳುವ ಮೂಲಕ ಇವರಿಗೆ ರಿಲೀಫ್ ನೀಡಿತ್ತು. ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದೆ. ಅಲ್ಲದೆ ಹೈ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೆಎಸ್ಸಿಎಯು, ಈ ಘಟನೆಗೆ ರಾಜ್ಯ ಸರ್ಕಾರವೇ ನೇರ ಕಾರಣ ಎನ್ನುವಂತೆ ಗಂಭೀರವಾದ ಆರೋಪಗಳನ್ನು ಮಾಡಿತ್ತು.
ನಿಜವಾಗಿಯೂ ರಾಜೇನಾಮೆ ನೀಡಬೇಕಾಗಿದ್ದವರು ಸೇಫ್, ಕೆಲಸ ಮಾಡಿದವರೇ ಬಲಿ..
ಪ್ರಮುಖವಾಗಿ ಆಗಿರುವ ದೊಡ್ಡ ದುರಂತದಿಂದ ಪರಾರಿಯಾಗಲು ಯತ್ನಿಸುತ್ತಿರುವ ರಾಜ್ಯ ಸರ್ಕಾರವು ವಿಪಕ್ಷಗಳು ಹಾಗೂ ರಾಜ್ಯದ ಜನರಿಗೆ ತಿಳಿಯುವಂತೆ ಕ್ರಮ ಕೈಗೊಂಡಿದ್ದೇವೆ ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳ ತಲೆದಂಡ, ವರ್ಗಾವಣೆಯಂತಹ ತಂತ್ರಗಳನ್ನು ಅನುಸರಿಸುತ್ತಿದೆ. ಆದರೆ ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿರುವ ಸರ್ಕಾರದದಲ್ಲಿರುವ ಸಿಎಂ, ಡಿಸಿಎಂ, ಗೃಹ ಮಂತ್ರಿ, ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ತಾವು ಸೇಫ್ ಆಗಿ ಉಳಿದು ಈ ಘಟನೆಯಾಗದಂತೆ ತಡೆಯಲು ಮುಂದಾಲೋಚನೆ ಹಾಕಿದ್ದ ಅಧಿಕಾರಿಗಳನ್ನು ಬಲಿ ಪಡೆಯುವ ಕೆಲಸ ಮಾಡಿದೆ. ನಿಜವಾಗಿಯೂ ರಾಜೀನಾಮೆ ನೀಡಬೇಕಾಗಿದ್ದವರು ಇನ್ನೂ ಕೂಡ ಕುರ್ಚಿಯಲ್ಲಿದ್ದಾರೆ. ಆದರೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರದ ನಡೆಯನ್ನು ಪ್ರತಿಯೊಬ್ಬರೂ ಸಹ ಖಂಡಿಸುವಂತಾಗಿದೆ.