Sandalwood News: ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಕಾಲಿಟ್ಟರೆ ಮುಗೀತು. ಒಂದೊಂದೇ ವಿಭಾಗದಲ್ಲಿ ಮಿಂದೇಳಬೇಕೆಂಬ ಬಯಕೆ ಸಹಜ. ಇಲ್ಲಿ ಹೀರೋ ಆಗಬೇಕು ಅಂತ ಬಂದವರು, ನಿರ್ದೇಶಕರಾಗುತ್ತಾರೆ. ನಿರ್ದೇಶನ ಮಾಡೋಕೆ ಬಂದವರು ಹೀರೋ ಆಗಿ, ನಿರ್ಮಾಪಕರಾಗಿರೋ ಉದಾಹರಣೆಗಳಿವೆ. ಈಗಾಗಲೇ ಅನೇಕ ಸ್ಟಾರ್ ನಟರು ನಿರ್ದೇಶಕರಾಗಿರುವ ಸಾಕಷ್ಟು ಉದಾಹರಣೆಗಳು ಇವೆ. ಇದು ಬರೀ ಕನ್ನಡ ಇಂಡಸ್ಟ್ರಿಯಲ್ಲಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲೇ ಇಂಥದ್ದೊಂದು ಬದಲಾವಣೆಗಳು ಆಗುತ್ತಲೇ ಇವೆ. ಆ ಸಾಲಿಗೆ ಈಗ ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಕೂಡ ಸೇರಿದ್ದಾರೆ.
ಹೌದು, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರ ಪೈಕಿ ಮೋಹನ್ ಲಾಲ್ ಅವರೂ ಒಬ್ಬರು. ಮಲಯಾಳಂ ಚಿತ್ರರಂಗದಲ್ಲಿ ಬರೋಬ್ಬರಿ ನಾಲ್ಕು ದಶಕಗಳ ಕಾಲ ಹೀರೋ ಆಗಿ ನೆಲೆಕಂಡವರು. ಈವರೆಗೆ 360 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ಆಗಿ, ನಿರ್ಮಾಪಕರಾಗಿಯೂ ಗೆಲುವು ಕಂಡ ಅವರು ಇದೀಗ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರೂ ಆಗಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಬರೋಜ್ ಎಂದು ಹೆಸರಿಡಲಾಗಿದೆ. ವಿಷಯ ಏನೆಂದ್ರೆ, ಈ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಭರ್ಜರಿ ಮೆಚ್ಚುಗೆ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಡಿಸೆಂಬರ್ 25ಕ್ಕೆ ರಿಲೀಸ್ ಆಗುತ್ತಿದೆ. ಕ್ರಿಸ್ ಮಸ್ ಹಬ್ಬಕ್ಕೆ ಇದೊಂದು ಧಮಾಕ ಎನ್ನಬಹುದು.
ಈಗಾಗಲೇ ತರಹೇವಾರಿ ಸಿನಿಮಾಗಳ ಮೂಲಕ ಹೀರೋ ಆಗಿ ಗಟ್ಟಿನೆಲೆಕಂಡಿರುವ ಮೋಹನ್ ಲಾಲ್, ನಿರ್ದೇಶಕರಾಗಿ ನೆಲೆಕಾಣ್ತಾರಾ ಈ ಪ್ರಶ್ನೆ ಸಹಜವಾಗಿಯೇ ಎಲ್ಲೆಡೆ ಕಾಡುತ್ತಿದೆ. ಅದೇನೆ ಇದ್ದರೂ, ಅವರ ಮೊದಲ ನಿರ್ದೇಶನದ ಬರೋಜ್ ಸಿನಿಮಾದ ಟ್ರೇಲರ್ ಸದ್ಯ ಸದ್ದು ಮಾಡುತ್ತಿದೆ. ಅನ್ನೋದೇ ಅವರ ಅಭಿಮಾನಿಗಳಿಗೆ ಖುಷಿಯ ವಿಷಯ.
ಅಂದಹಾಗೆ, ಮೋಹನ್ ಲಾಲ್ ದಕ್ಷಿಣ ಭಾರತದ ಸೂಪರ್ ಸ್ಟಾರ್ಸ್ ಪೈಕಿ ತುಂಬಾ ಫೇಮ್ ಎನಿಸುವ ನಟ. ಅವರ ನಟನೆಯಾಗಲಿ ಅಥವಾ ಆವರು ಆಯ್ಕೆ ಮಾಡಿಕೊಳ್ಳುವ ಕಥೆಗಳಾಗಿರಲಿ ತುಂಬಾನೇ ವಿಭಿನ್ನ. ಅದರಲ್ಲೂ ಕಥೆ ಆಯ್ಕೆ ವಿಚಾರದಲ್ಲಂತೂ ಮೋಹನ್ ಲಾಲ್ ತುಂಬಾನೆ ಎಚ್ಚರವಹಿಸುವ ನಟ. ಅವರು ಈಗಾಗಲೇ ನಟರಾಗಿ, ನಿರ್ಮಾಪಕರಾಗಿ ಯಶಸ್ಸು ಕಂಡಿದ್ದಾಗಿದೆ. ನಿರ್ದೇಶನ ಎಂಬುದನ್ನೂ ಒಮ್ಮೆ ನೋಡಿಬಿಡೋಣ ಅಂತ ಅಖಾಡಕ್ಕೆ ಇಳಿದಂತಿರುವ ಮೋಹನ್ ಲಾಲ್ ಈ ಮೂಲಕವೂ ಸಕ್ಸಸ್ ಕಾಣುವ ಉತ್ಸಾಹದಲ್ಲಂತೂ ಇದ್ದಾರೆ. ತಮ್ಮ ಮೊದಲ ಸಿನಿಮಾ ‘ಬರೋಜ್’ ಮೂಲಕ ನೋಡುಗರನ್ನು ಖುಷಿಪಡಿಸುವ ಸಲುವಾಗಿಯೇ ಮಾಯಾ ಲೋಕ ಮತ್ತು ವಾಸ್ತವದ ಕಥಾಹಂದರವನ್ನು ತೆರೆದಿಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಮೋಹನ್ ಲಾಲ್.
ಈವರೆಗೆ ಅವರು 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ರಾಜ್ಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳೂ ಅವರ ಮಡಿಲು ಸೇರಿವೆ. ತಮ್ಮ ಅಮೋಘ ಅಭಿನಯದ ಮೂಲಕ ದೇಶದ ಗಮನ ಸೆಳೆದಿರುವ ಮೋಹನ್ ಲಾಲ್, ಈಗ ನಿರ್ದೇಶಕನ ಕ್ಯಾಪ್ ಧರಿಸಿ ‘ಬರೋಜ್’ ಜಪದಲ್ಲಿದ್ದಾರೆ. ಅವರ ಮೊದಲ ಸಿನಿಮಾಗೆ ಭಾರತೀಯ ಚಿತ್ರರಂಗವೇ ಶುಭಕೋರಿದೆ. ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಗೆ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ, ಹಲವು ಭಾಷೆಯ ಸಿನಿಮಾ ಸ್ಟಾರ್ಸ್ ಮೆಚ್ಚಿಗೆ ಸೂಚಿಸಿದ್ದಾರೆ.
ಮೋಹನ್ ಲಾಲ್ ಇಲ್ಲಿ ಕೇವಲ ನಿರ್ದೇಶಕರಾಗಿಲ್ಲ. ‘ಬರೋಜ್’ ಮೊದಲ ನಿರ್ದೇಶನದ ಸಿನಿಮಾ ಆಗಿದ್ದರೂ, ಅವರಿಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಇಷ್ಟಕ್ಕೂ ಈ ಸಿನಿಮಾದ ಒನ್ ಲೈನ್ ಏನಿರಬಹುದು ಎಂಬ ಕುತೂಹಲಕ್ಕೆ ಟ್ರೇಲರ್ ಉತ್ತರವಾಗಿದೆ. ಅಂದಹಾಗೆ, ‘ಬರೋಜ್’ ಎಂಬುದು ನಿಧಿ ಕಾಯುವ ಭೂತವೊಂದರ ಹೆಸರು. ಶತಮಾನಗಳಿಂದಲೂ ವಾಸ್ಕೋಡಿಗಾಮನ ಅರಮನೆಯಲ್ಲಿ ನಿಧಿ ಕಾಯುವ ಭೂತಕ್ಕೂ ಒಂದು ಕತೆ ಇದೆ. ಈ ಭೂತದ ಕರ್ತವ್ಯ ನಿಷ್ಠೆಗೆ ಸವಾಲೊಂದು ಎದುರಾಗುತ್ತೆ. ಅದೇನು ಅನ್ನೋದೇ ಇಂಟ್ರೆಸ್ಟಿಂಗ್. ಆ ಇಂಟ್ರೆಸ್ಟ್ರಿಂಗ್ ವಿಷಯವನ್ನು ಸಿನಿಮಾದಲ್ಲೇ ನೋಡಬೇಕಿದೆ. ಇದೊಂದು ಥ್ರಿಲ್ಲರ್ ಎಲಿಮೆಂಟ್ಸ್ ಸಿನಿಮಾ. ಚಿತ್ರದುದ್ದಕ್ಕೂ ಅದ್ಭುತ ವಿಎಫ್ಎಕ್ಸ್ ಇದೆ. 3ಡಿ ರೂಪದಲ್ಲೂ ಬರೋಜ್ ಹೊರಬರುತ್ತಿರುವುದು ವಿಶೇಷ.
ಇನ್ನು, ಈಗ ಬರುತ್ತಿರುವ ಯಾವುದೇ ಸಿನಿಮಾ ಇರಲಿ, ಎಲ್ಲವೂ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಬರುತ್ತಿವೆ. ಬರೋಜ್’ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಸಿನಿಮಾ 3ಡಿ ಅವತರಣಿಕೆಯೂ ಬಿಡುಗಡೆ ಆಗಲಿದೆ. ಸಿನಿಮಾದೊಳಗಿನ ಭೂತಕಾಲ, ವರ್ತಮಾನದ ಕಾಲದ ಕತೆ ನೋಡುಗರಲ್ಲಿ ಮಜ ತರಿಸುತ್ತೆ ಎಂಬ ಅದಮ್ಯ ನಂಬಿಕೆ ಮೋಹನ್ ಲಾಲ್ ಅವರಿಗೆ. ಇನ್ನು, ಅಕ್ಷಯ್ ಕುಮಾರ್ ಅವರು ಈ ಸಿನಿಮಾದ ಹಿಂದಿ ಟ್ರೇಲರ್ ಅನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರ. ಕನ್ನಡದಲ್ಲೂ ಬರೋಜ್ ಟ್ರೇಲರ್ ರಿಲೀಸ್ ಆಗಿದೆ. ಇನ್ನೊಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಮೋಹನ್ ಲಾಲ್ ಅವರ ಆಪ್ತ, ಮಾಜಿ ಡ್ರೈವರ್ ಆಂಟೋನಿ ಪೆರುಂಬವೂರ್ ಅವರ ಆಶೀರ್ವಾದ್ ಸಿನಿಮಾಸ್‌ನ ಮೂಲಕ ‘ಬರೋಜ್’ ಸಿನಿಮಾ ನಿರ್ಮಾಣವಾಗಿದೆ. ಮೋಹನ್ ಲಾಲ್ ನಿರ್ದೇಶನ ಮತ್ತು ಪಿವಿಆರ್ ಪಿಕ್ಚರ್ಸ್ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ಇನ್ನು, ಈ ಸಿನಿಮಾದಲ್ಲಿ ಮೋಹನ್ ಲಾಲ್ ಅವರ ಜೊತೆ ಪೃಥ್ವಿರಾಜ್ ಸುಕುಮಾರ್ ಕೂಡ ನಟಿಸಿದ್ದಾರೆ. ಉಳಿದಂತೆ ಹಲವು ವಿದೇಶಿ ಕಲಾವಿದರು ಇದ್ದಾರೆ. ಬರೋಜ್ ಟ್ರೇಲರ್ ನೋಡಿದವರಿಗೆ ಒಂದೊಳ್ಳೆಯ ಮಜಬೂತಾದ ಸಿನಿಮಾ ಇದು ಎಂದೆನಿಸದೇ ಇರದು.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ