ಕೆಲ ವರ್ಷಗಳ ಹಿಂದೆ ಈಟಿವಿ ಕನ್ನಡದಲ್ಲಿ ಬರುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ..? ಸಿಹಿ ಕಹಿ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿನ ನೋಡಲು ಎಲ್ಲರೂ ತುದಿಗಾಲಿನಲ್ಲಿ ಕಾದು ಕುಳಿತಿರುತ್ತಿದ್ದರು. ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು ನೋಡುಗರ ಮನಸ್ಸಿನಲ್ಲಿ ಅಚ್ಚುಳಿದಿದೆ. ಡಾ. ವಿಠ್ಠಲ್ ರಾವ್, ಲಲಿತಾಂಬಾ, ಶ್ರೀಲತಾ, ಪಲ್ಲಿ, ಸೂಜಿ, ವಿಶಾಲಾಕ್ಷಿ, ರಂಗನಾಥ್, ಲಲ್ತಾ, ಜಾಣೇಶ ಹೀಗೆ ಎಲ್ಲರ ಪಾತ್ರವೂ ಕೂಡ ಈಗಲೂ ನೆನಪಿನಲ್ಲಿಡುವಷ್ಟು ಫೇಮಸ್ ಆದ ಧಾರಾವಾಹಿ ಅಂದ್ರೆ ಸಿಲ್ಲಿ ಲಲ್ಲಿ ಧಾರಾವಾಹಿ.
ಈ ಧಾರಾವಾಹಿಯ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ನಟಿ ಮಂಜು ಭಾಷಿಣಿ ಅಂದ್ರೆ ಸಮಾಜ ಸೇವಕಿ ಲಲಿತಾಂಬ, ಮತ್ತೆ ಬಡ್ಡಿ ಬಂಗಾರಮ್ಮನಾಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಜೀ ಕನ್ನಡದಲ್ಲಿ ಬರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಖಡಕ್ ಪಾತ್ರವಾಗಿರುವ ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ಮಂಜು ಭಾಷಿಣಿ ಮಿಂಚಲಿದ್ದಾರೆ.
ಇನ್ನು ಯಾಕೆ ಮಂಜು ಇಷ್ಟು ದಿನ ಬ್ರೇಕ್ ತೆಗೆದುಕೊಂಡಿದ್ರು ಅನ್ನೋ ಪ್ರಶ್ನೆಗೆ ಉತ್ತರ, ಪತಿಯ ಕಂಪನಿ ಕೆಲಸಕ್ಕಾಗಿ ಹಲವು ದೇಶ ಸುತ್ತಬೇಕಾಗಿದ್ದ ಕಾರಣ, ಬೆಂಗಳೂರಿನಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಬ್ರೇಕ್ ತೆಗೆದುಕೊಂಡಿದ್ದರಂತೆ. ಆದ್ರೆ ಈಗ ಕೊರೊನಾ ಇರುವ ಕಾರಣ ಭಾರತದಲ್ಲೇ ಕಂಪನಿ ಕೆಲಸವಾಗುತ್ತಿದೆ. ಹೀಗಾಗಿ ಮತ್ತೆ ಶೂಟಿಂಗ್‌ಗೆ ಮರಳಿದ್ದಾರೆ ಮಂಜು ಭಾಷಿಣಿ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶೂಟಿಂಗ್‌ನಲ್ಲಿ ಭಾಗವಹಿಸಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಏನೇ ಆಗಲಿ, ಲಲಿತಾಂಬಾ ಪಾತ್ರದಂತೆ ಬಡ್ಡಿ ಬಂಗಾರಮ್ಮನ ಪಾತ್ರವೂ ಜನರ ಮನಸ್ಸಿನಲ್ಲಿ ಅಚ್ಚುಳಿಯಲಿ ಅಂತಾ ಹಾರೈಸೋಣ.