ಬೆಂಗಳೂರು: ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಕಾಂಗ್ರೆಸ್ ಇದೀಗ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಕೈ ತೊಳೆದುಕೊಂಡಿದೆ. ಈ ಮೂಲಕ ಅತೃಪ್ತರಿಗೆ ಪಕ್ಷದ ಬಾಗಿಲು ಮುಚ್ಚಿದ್ದು ವ್ಯಕ್ತಿಗಿಂತಲೂ ಪಕ್ಷ ದೊಡ್ಡದು ಅನ್ನೋ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಮೈತ್ರಿ ಸರ್ಕಾರವನ್ನು ಬುಡಮೇಲು ಮಾಡಿ ದೋಸ್ತಿ ನಾಯಕರನ್ನು ಇನ್ನಿಲ್ಲದಂತೆ ಕಾಡಿದ್ದ ಅನರ್ಹ ಶಾಸಕರನ್ನು ಇದೀಗ ಕಾಂಗ್ರೆಸ್ ಪಕ್ಷದಿಂದ ಹೊರದಬ್ಬಲಾಗಿದೆ. ಇದೀಗ ಆದೇಶ ಹೊರಡಿಸಿರೋ ಎಐಸಿಸಿ ಮಂದಿ ಅನರ್ಹ ಶಾಸಕರನ್ನು ಉಚ್ಚಾಟಿಸಿದೆ. ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್, ಆರ್. ಶಂಕರ್, ಆನಂದ್ ಸಿಂಗ್, ಡಾ.ಕೆ ಸುಧಾಕರ್, ಭೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ಮುನಿರತ್ನ, ರೋಷನ್ ಬೇಗ್ ಹಾಗೂ ಎಂಟಿಬಿ ನಾಗರಾಜ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಈ ಮೂಲಕ ಕಾಂಗ್ರೆಸ್ ನಲ್ಲೇ ಇದ್ದೇವೆ, ಇನ್ನು ಮುಂದೆಯೂ ಕಾಂಗ್ರೆಸ್ ನಲ್ಲೇ ಇರುತ್ತೇವೆ ಅಂತ ಹೇಳಿಕೊಂಡು ತಿರುಗಾಡುತ್ತಿದ್ದ ಅನರ್ಹ ಶಾಸಕರು ಇದೀಗ ಉಚ್ಚಾಟಿತರೂ ಆಗಿ ಅವರಿಗೆ ಪಕ್ಷದ ಬಾಗಿಲು ಮುಚ್ಚಿದಂತಾಗಿದೆ.
ಮುಂಬೈನಲ್ಲಿದ್ದ ಅನರ್ಹ ಶಾಸಕರನ್ನು ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ವೇಳೆ ಬರುವಂತೆ ಪರಿಪರಿಯಾಗಿ ಬೇಡಿಕೊಂಡರೂ ಗೈರಾಗಿದ್ದ ಹಿನ್ನೆಲೆಯಲ್ಲಿ ಅವರ ಅನರ್ಹತೆಗಾಗಿ ಸ್ಪೀಕರ್ ಮೊರೆ ಹೋಗಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದೀಗ ಎಐಸಿಸಿ ಮುಂದೆ ಅನರ್ಹಗೊಂಡಿರುವ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸುವ ಪ್ರಸ್ತಾವನೆ ಇಟ್ಟಿದ್ದರು. ಈ ಕುರಿತು ಇದೀಗ ನಿರ್ಧಾರ ಮಾಡಿರೋ ಎಐಸಿಸಿ ಈ ಎಲ್ಲಾ 14 ಮಂದಿ ಅನರ್ಹ ಶಾಸಕರನ್ನು ಪಕ್ಷದಿಂದ ಹೊರದಬ್ಬಿದೆ.