Wednesday, April 16, 2025

Latest Posts

ದೇಶದ ಸುಭಿಕ್ಷೆಗಾಗಿ ಬಿಜೆಪಿ ಜತೆ ಹೊಂದಾಣಿಕೆ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿಕೆ

- Advertisement -

Hubballi Political News: ಹುಬ್ಬಳ್ಳಿ: ರಾಜ್ಯ ಹಾಗೂ ದೇಶದ ಸುಭಿಕ್ಷೆಗಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಭದ್ರವಾಗಿದೆ. ಬಸವಣ್ಣ ಹುಟ್ಟಿದ ಕಾಯಕದ ನಾಡಿನಿಂದಲೇ ಪಕ್ಷಕ್ಕೆ ಪುನಶ್ಚೇತನ ಸಿಗಲಿದೆ. ಮತ್ತೆ ಎದ್ದು ಬರಲಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.

ಇಲ್ಲಿಯ ಗೋಕುಲ ರಸ್ತೆ ವಾಸವಿ ಮಹಲ್ನಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್ ವಿಭಾಗ ಮಟ್ಟದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಇಂದಿನಿಂದಲೇ ಪಣ ತೊಡಬೇಕು. ವಿಧಾನಸಭೆ ಚುನಾವಣೆ ವೇಳೆ ಐದು ಗ್ಯಾರಂಟಿಗಳನ್ನು ನೀಡಿದ್ದ ಸಿದ್ದರಾಮಯ್ಯ ಸರ್ಕಾರ ಅವುಗಳನ್ನು ಈಡೇರಿಸಲು ಹೆಣಗಾಡುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕರೊನಾ ಸಂದರ್ಭದಲ್ಲಿ 80 ಕೋಟಿ ಜನರಿಗೆ ಅಕ್ಕಿ ಕೊಟ್ಟಿದ್ದಾರೆ. ವಿದ್ಯುತ್ ಉಚಿತ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರರಿಂದ ಸರಿಯಾಗಿ ಕರೆಂಟ್ ಪೂರೈಕೆಯಾಗುತ್ತಿಲ್ಲ. ರೈತರ ಆತ್ಮಹತ್ಯೆಯೇ ಇವರ ಆರನೇ ಗ್ಯಾರಂಟಿ ಯೋಜನೆಯಾಗಿದೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ರೈತರ ಪಂಪ್ಸೆಟ್ಗಳಿಗೆ ಏಳು ತಾಸು ನಿರಂತರ ವಿದ್ಯುತ್ ನೀಡುತ್ತಿದ್ದರು. ಈಗ ರಾಜ್ಯದಲ್ಲಿ ಬರಗಾಲ ಆವರಿಸಿದರೂ ಮೂರು ಗಂಟೆ ವಿದ್ಯುತ್ ಕೊಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋರ್ ಕಮಿಟಿ ಸಂಚಾಲಕ ವೈ.ಎಸ್.ವಿ. ದತ್ತಾ ಅವರು ಮಾತನಾಡಿ, ಚುನಾವಣೆಗಳಲ್ಲಿ ಜನತಾ ದಳ ನೆಲ ಕಚ್ಚಿದ್ದು ಇದೇ ಮೊದಲಲ್ಲ. ಹಿಂದೆಯೂ ಬಹಳಷ್ಟು ಸಲ ಸೋತು ಮತ್ತೆ ಮೇಲೆದ್ದಿದೆ. ಈಗಲೂ ಅದೇ ಪರಿಸ್ಥಿತಿ ಇದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಲ್ಲಿ ಛಲ ಇದೆ. ಅವರ ನೇತೃತ್ವದಲ್ಲಿ ಪಕ್ಷ ಮತ್ತೆ ಸಂಘಟನೆಗೊಳ್ಳಲಿದೆ.

ಅವರು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರೆ ಏನೋ ವಿಶೇಷ ಇದೆ ಎಂದೇ ಅರ್ಥ. ದೊಡ್ಡ ಗೌಡರು ಸದಾ ಚಿಂತನಶೀಲರು. ಅವರು ಏನು ಪ್ಲಾನ್ ಮಾಡುತ್ತಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ, ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿರುವುದರಲ್ಲಿ ಒಂದು ಒಳ್ಳೆಯ ಉದ್ದೇಶ ಖಂಡಿತ ಇದೆ ಎಂದು ಅಭಿಪ್ರಾಯಪಟ್ಟರು.

ಕೋರ್ ಕಮಿಟಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ವಾಸವಿ ಮಹಲ್ವರೆಗೂ ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ಶ್ರೀಸಿದ್ಧಾರೂಢ ಮಠ ಮತ್ತು ಸೈಯ್ಯದ್ ಫತೇಷಾವಲಿ ದರ್ಗಾಕ್ಕೆ ಪದಾಧಿಕಾರಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕಾಂಗ್ರೆಸ್ನವರಿಂದಲೇ ಸರ್ಕಾರ ಪತನ

ಕಾಂಗ್ರೆಸ್ ಸರ್ಕಾರವನ್ನು ಅವರ ಪಕ್ಷದವರೇ ಕೆಡವಲಿದ್ದಾರೆ. ಅಭಿವೃದ್ಧಿ ಹಾಗೂ ಇತರ ವಿಚಾರವಾಗಿ ಅವರ ನಾಯಕರಲ್ಲೇ ಸಾಕಷ್ಟು ಅಸಮಾಧಾನವಿದೆ. ಬರುವ ದಿನಗಳಲ್ಲಿ ಕುಮಾರಸ್ವಾಮಿ ನೂರಕ್ಕೆ ನೂರಷ್ಟು ಮುಖ್ಯಮಂತ್ರಿ ಆಗಲಿದ್ದಾರೆ. ಈಗಾಗಲೇ ಅನೇಕ ನಾಯಕರು ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದು, ನಮ್ಮ ನಾಯಕರು ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಜಿ.ಟಿ. ದೇವೇಗೌಡ ತಿಳಿಸಿದರು.

- Advertisement -

Latest Posts

Don't Miss