ಅಮೆಜಾನ್ ಕಂಪನಿಯು 2033ರ ವೇಳೆಗೆ ಸುಮಾರು 6 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದೆಯಂತೆ. ಈ ಜಾಗಕ್ಕೆ ಉದ್ಯೋಗಿಗಳ ಬದಲಿಗೆ ರೋಬೋಟ್‌ಗಳನ್ನು ನಿಯೋಜಿಸಲು ಪ್ಲಾನ್ ಮಾಡಲಾಗಿದೆ ಎಂದು, ಹಲವು ವರದಿಗಳಿಂದ ತಿಳಿದುಬಂದಿದೆ. 2027ರ ವೇಳೆಗೆ ರೋಬೋಟ್‌ಗಳ ಬಳಕೆಯಿಂದ, ಬರೋಬ್ಬರಿ 1 ಲಕ್ಷದ 60 ಸಾವಿರ ಉದ್ಯೋಗ ಕಡಿತವಾಗುವ ನಿರೀಕ್ಷೆ ಇದೆ ಎಂದು ಅಮೆಜಾನ್ ಕಂಪನಿ ಹೇಳಿಕೊಂಡಿದೆ. ಆದರೂ ಅದರ ಎರಡು ಪಟ್ಟು ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುವ ನಿರೀಕ್ಷೆಯಿದೆ.
ರೊಬೋಟ್‌ಗಳ ನೇಮಕಾತಿಯಿಂದಾಗಿ ಆಯ್ಕೆ ಮಾಡುವ, ಪ್ಯಾಕ್ ಮಾಡುವ ಮತ್ತು ತಲುಪಿಸುವುದು ಸೇರಿದಂತೆ, ಪ್ರತಿಯೊಂದು ವಸ್ತುವಿನ ಮೇಲೆ 26 ರೂ.ಗಳನ್ನು ಉಳಿಸುತ್ತದೆ ಎನ್ನಲಾಗ್ತಿದೆ. ಇದರಿಂದ 2027ರ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 1,60,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳುವುದನ್ನು ತಪ್ಪಿಸಬಹುದೆಂದು ನಿರೀಕ್ಷಿಸಲಾಗಿದೆ.
ರೋಬೋಟಿಕ್ ಯಾಂತ್ರೀಕರಣಕ್ಕೆ ಅಮೆಜಾನ್‌ನ 2012ರಲ್ಲಿ ಹೆಚ್ಚು ಒತ್ತು ನೀಡಲು ಆರಂಭಿಸಿತು. ಅದು ರೊಬೊಟಿಕ್ಸ್ ತಯಾರಕ ಕಿವಾವನ್ನು, 775 ಮಿಲಿಯನ್ ಡಾಲರ್‌ಗೆ ಖರೀದಿಸಿತು. ಕಳೆದ ವರ್ಷ, ಕಂಪನಿಯು ತನ್ನ ಅತ್ಯಂತ ಮುಂದುವರಿದ ಗೋದಾಮನ್ನು ಪ್ರಾರಂಭಿಸಿತು. ಇದರಲ್ಲಿ ಸುಮಾರು 1,000 ರೋಬೋಟ್‌ಗಳು ಯಾವುದೇ ಮಾನವ ಒಳಗೊಳ್ಳುವಿಕೆ ಇಲ್ಲದೆ ಪ್ಯಾಕೇಜ್ ಮಾಡುತ್ತಿವೆ.
ಪ್ರಸ್ತುತ ಅಮೆಜಾನ್ ವಿಶ್ವಾದ್ಯಂತ ಸುಮಾರು 12 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಈ ದೊಡ್ಡ ಬದಲಾವಣೆಯಿಂದ ಉಂಟಾಗಬಹುದಾದ ಸಾರ್ವಜನಿಕರ ವಿರೋಧ ಮತ್ತು ಟೀಕೆಗಳನ್ನು ತಪ್ಪಿಸಲು ಅಮೆಜಾನ್ ಈಗಾಗಲೇ ಸಿದ್ಧತೆ ನಡೆಸಿದೆ. ಆಟೋಮೇಷನ್ ಅಥವಾ ಕೃತಕ ಬುದ್ಧಿಮತ್ತೆ ಬದಲಿಗೆ ಸುಧಾರಿತ ತಂತ್ರಜ್ಞಾನ ಎಂಬ ಪದವನ್ನು ಬಳಸಲು ಕಂಪನಿ ನಿರ್ಧರಿಸಿದೆ. ಅದೇ ರೀತಿ, ‘ರೋಬೋಟ್’ಗಳಿಗೆ ಬದಲಾಗಿ ‘ಕೋಬೋಟ್ಸ್’ ಅಂದರೆ, ಮಾನವರು ಮತ್ತು ರೋಬೋಟ್‌ಗಳ ಸಹಯೋಗ ಎಂದು ಬಿಂಬಿಸಲು ಸಜ್ಜಾಗಿದೆ.