ಮಂಡ್ಯ: ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆ ಹಾಗೂ ದೀನ ದಲಿತರರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದ ಉದ್ಯಾನವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132 ಜನ್ಮದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಕಷ್ಟ ಕಾರ್ಪಣ್ಯಾಗಳನ್ನ ಅನುಭವಿಸಿ ಶಿಕ್ಷಣ ಪಡೆದು ಬೃಹಧಕಾರವಾಗಿ ಬೆಳೆದು, ಸ್ವಾತಂತ್ರ್ಯ ಬಂದ ನಂತರ ಇಡೀ ಭಾರತಕ್ಕೆ ವಿಶ್ವವೇ ಹೆಮ್ಮೆ ಪಡುವಂತಹ ಸಂವಿಧಾನವನ್ನು ರಚಿಸಿದ್ದಾರೆ ಎಂದರು.
ಸರ್ಕಾರಗಳು ಹಾಗೂ ಸಾರ್ವಜನಿಕರು ಅವರ ತತ್ವ ಆದರ್ಶಗಳನ್ನ ಪಾಲನೆ ಮಾಡುತ್ತಾ ಅಂಬೇಡ್ಕರ್ ಅವರು ತೋರಿಸಿಕೊಟ್ಟ ದಿಕ್ಕಿನಲ್ಲಿ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.
ಭಾರತವು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವುದರ ಜೊತೆಗೆ ಹಿಂದುಳಿದ ರಾಷ್ಟ್ರದಿಂದ ಮುಂದುವರೆದ ರಾಷ್ಟ್ರವಾಗಿ ಮಾರ್ಪಾಡು ಆಗುತ್ತಿದೆ ಇದಕ್ಕೆ ಬಾಬಾ ಸಾಹೇಬರ ಕೊಡುಗೆ ಬಹಳ ಅನನ್ಯವಾದುದು ಎಂದು ಸ್ಮರಿಸಿದರು.
ಭಾರತ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲಾ ಒಟ್ಟಾಗಿ ದುಡಿದು ಅವರ ಸಮಸಮಾಜದ ಕನಸನ್ನು ನನಸು ಮಾಡೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಂದೇ ಧರ್ಮ ಜಾತಿ ಅಥವಾ ಜನಾಂಗಕ್ಕೆ ಸೇರಿದವರೆಲ್ಲಾ, ಅವರು ಎಲ್ಲಾ ವರ್ಗದ ಜನರಿಗೂ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ, ಆಗಾಗಿ ಅವರು ಪ್ರಪಂಚದ ಆಸ್ತಿಯಾಗಿದ್ದಾರೆ ಎಂದರು.
ಪ್ರಜಾಪ್ರಭುತ್ವ ರೂವಾರಿ, ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಟ್ಟು ದೇಶದ ಹಿತವನ್ನು ಬಯಸಿದ ಅಪ್ರತಿಮ ರಾಷ್ಟ್ರ ನಾಯಕ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರು ಬಣ್ಣಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಾವು ದೇಶಕ್ಕೆ ಮತ್ತೊಮ್ಮೆ ಪರಿಚಯಿಸುವ ಅಗತ್ಯ ಇಲ್ಲಾ, ಏಕೆಂದರೆ ಅವರು ದೇಶಕ್ಕೆ ನೀಡಿದ ಕೊಡುಗೆಗಳಿಂದ ಈಗಾಗಲೇ ಜಗತ್ತಿಗೆ ಪರಿಚಯವಾಗಿದೆ ಎಂದರು.
ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕವಾಗಿ ಹಾಗೂ ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ. ಶಿಕ್ಷಣ ಪಡೆದು ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ನೈತಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಸದೃಢ ಸಮಾಜ ಮತ್ತು ರಾಷ್ಟ್ರವನ್ನು ಕಟ್ಟುವುದು ಸುಲಭವಾಗುತ್ತದೆ. ಶಿಕ್ಷಣ ಪಡೆದು ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಹೋರಾಟಗಾರರಾಗಬೇಕಿದೆ ಎಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು. ಆಗಾಗಿ ಎಲ್ಲರೂ ಶಿಕ್ಷಣ ಪಡೆದು ಹೋರಾಟಗಳ ಮೂಲಕ ತಮ್ಮ ಹಕ್ಕು ಪಡೆದುಕೊಳ್ಳಿ ಎಂದರು.
ಭಾರತದಲ್ಲಿ ಹುಟ್ಟಿದ ಗೌತಮ ಬುದ್ದರು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಿ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.
ರಾಜಕೀಯ ಸ್ವಾತಂತ್ರ್ಯದ ಜೊತೆಗೆ ವ್ಯಕ್ತಿಗೆ ಗೌರವ ತಂದುಕೊಡುವ ಸಾಮಾಜಿಕ ಸ್ವಾತಂತ್ರ್ಯ ಬೇಕೆಂದು ಸ್ವತಂತ್ರ ಚಳುವಳಿಯ ಸಮಯದಲ್ಲೆ ಪ್ರತಿಪಾದಿಸಿದರು.
ಅಂಬೇಡ್ಕರ್ ಅವರು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಅರ್ಥಶಾಸ್ತ್ರದಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದರು. ಅದಕ್ಕೆ ಮಾನ್ಯತೆಯನ್ನು ಗಳಿಸಿದ್ದರು. ರೂಪಾಯಿಯ ಸಮಸ್ಯೆಗಳು: ಇದರ ಉಗಮ ಮತ್ತು ಪರಿಹಾರ ಕೃತಿಯು ಪ್ರಸ್ತುತ ಎಂದರು.
ಉದ್ಯೋಗಿಗಳನ್ನು ಉದ್ಯಮಿಗಳು ಶೋಷಿಸಬಾರದು ಎಂದು ಕಠಿಣ ಕಾನೂನುಗಳನ್ನು ಸರಕಾರ ರೂಪಿಸಬೇಕು ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಉಪವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್, ತಹಶೀಲ್ದಾರ್ ಆರ್.ವಿಜಯ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ನಾನು ಈ ಜಾತಿಯಲ್ಲೇ ಹುಟ್ಟಿದ್ದು ತಪ್ಪಾಯ್ತಾ?’ : ಟಿಕೇಟ್ ಸಿಗದ ಕಾರಣ ಭಾವುಕರಾದ ಮೋಹನ್ ಕೃಷ್ಣ
ಮಂಡ್ಯ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಸತೀಶ್ ನಿನಾಸಂ




