ದೀದಿ ಕೋಟೆಗೆ ಅಮಿತ್ ಶಾ ಲಗ್ಗೆ!

ಪಶ್ಚಿಮ ಬಂಗಾಳ ಚುನಾವಣಾ ಅಖಾಡ ಕಾವೇರಿದೆ. ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್‌ ಶಾ, ದೀದಿ ಸರ್ಕಾರವನ್ನ ಗೂಂಡಾ ರಾಜ್ಯ ಅಂತ ಕರೆದ್ರೆ, ಬಿಜೆಪಿ ಎರಡು ತಲೆ ಹಾವು ಎಂದು ಮಮತಾ ತಿರುಗೇಟು ನೀಡಿದ್ದಾರೆ. ಈ ನಡುವೆ ಆಂತರಿಕ ಸರ್ವೇ ರಿಪೋರ್ಟ್‌ ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಮತ್ತೊಂದೆಡೆ ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಟಿಎಂಸಿಗೆ ಮತ್ತೊಂದು ಹಿನ್ನಡೆಯಾಗಿದೆ.

ಪಂಚರಾಜ್ಯಗಳ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಮತಸಮರ ತಾರಕಕ್ಕೇರಿದೆ. ಈ ಬಾರಿ ಬಂಗಾಳದಲ್ಲಿ ಗೆಲುವಿನ ರಣಕಹಳೆ ಮೊಳಗಿಸಿ, ಕಮಲ ಅರಳಿಸಲು ಕೇಸರಿ ಪಡೆ ಪಣತೊಟ್ಟಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮಾತಿನ ಯುದ್ಧ, ಆರೋಪ..ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ಈ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದೀದಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಚುನಾವಣಾ ರ್ಯಾಲಿಗಳಲ್ಲಿ ತೃಣಮೂಲ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿರ್ಭುಮ್ ಜಿಲ್ಲೆಯ ಬೋಲ್ಪುರದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಂಗಾಳದಲ್ಲಿ “ಗೂಂಡಾ ರಾಜ್” ನೆಲೆಸಿದೆ.

ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಜನರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಟಿಎಂಸಿ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಟಿಎಂಸಿ ಗೂಂಡಾಗಳ ಬಾಂಬ್‌ ಮತ್ತು ಬುಲ್ಲೆಟ್‌ಗಳಿಗೆ ಜನರು ವೋಟ್‌ ಮೂಲಕವೇ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಿಜೆಪಿ ಅಧಿಕಾರದಲ್ಲಿದ್ದು, ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ, ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ.

ಮಹಿಳಾ ಮುಖ್ಯಮಂತ್ರಿಯಿದ್ದರೂ, ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಾಗಿದೆ. ಭ್ರಷ್ಟಾಚಾರ ವಿಷ್ಯದಲ್ಲೂ ಟಿಎಂಸಿ ಸರ್ಕಾರ ಮುಂದಿದ್ದು ಶಿಕ್ಷಕರ ನೇಮಕಾತಿ, ಪಡಿತರ ವಿತರಣೆ, ಮನರೇಗಾ ಸೇರಿದಂತೆ ಹಲವು ಇಲಾಖೆಗಳಲ್ಲಿ 5 ಸಾವಿರ ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಶಾ ಆರೋಪಿಸಿದ್ರು. ಇನ್ನು ಬಂಗಾಳದಲ್ಲಿ ಅಕ್ರಮ ಓಳನುಸುಳುಕೋರರು ಸಂಖ್ಯೆ ಮಿತಿ ಮೀರಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅವರೆನ್ನೆಲ್ಲಾ ಗುರುತಿಸಿ ಹೊರ ಹಾಕಲಾಗುತ್ತದೆ ಎಂದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಆಮ್‌ ಜನತಾ ಉನ್ನಯನ್‌ ಪಾರ್ಟಿ ಮುಖ್ಯಸ್ಥ ಹುಮಾಯೂನ್‌ ಕಬೀರ್‌ ಇಬ್ಬರು ಒಂದೇ, ಬಂಗಾಳದಲ್ಲಿ ಬಿಜೆಪಿ ಗೆದ್ರೆ ಹುಮಾಯೂನ್‌ ಘೋಷಿದಂತೆ ಬಾಬ್ರಿ ಮಸೀದಿ ನಿರ್ಮಿಸಲು ಬಿಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನ ಮಮತಾ ಬ್ಯಾನರ್ಜಿ ವಿರೋಧಿಸಿದ್ದರು. ಈಗ ಟಿಎಂಸಿಯ ಮಾಜಿ ನಾಯಕ ಅಯೋಧ್ಯೆಯಲ್ಲಿ ಧ್ವಂಸ ಮಾಡಲಾದ ಬಾಬ್ರಿ ಮಸೀದಿಯನ್ನ ನಿರ್ಮಿಸಲು ಸಜ್ಜಾಗಿದ್ದಾರೆ.

550 ವರ್ಷ ಟೆಂಟ್‌ನಡಿ ವಾಸವಿದ್ದ ರಾಮನಿಗೆ ಗುಡಿ ಕಟ್ಟುವುದನ್ನ ಟಿಎಂಸಿ, ಕಾಂಗ್ರೆಸ್‌, ಡಿಎಂಕೆ, ಎಸ್ಪಿ, ಬಿಎಸ್ಪಿ ಪಕ್ಷಗಳು ಒಟ್ಟಾಗಿ ವಿರೋಧಿಸಿದ್ದವು. ಅದ್ಭುತ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಿಂದ ಮಾತ್ರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸಾಧ್ಯವಾಯ್ತು. ಮಮತಾರಂತೆಯೇ ಯೋಚಿಸುವ ಹುಮಾಯೂನ್‌ ಈಗ ಬೆಂಗಾಲ್‌ನಲ್ಲಿ ಬಾಬ್ರಿ ಮಸೀದಿ ನಿರ್ಮಿಸಲು ಮುಂದಾಗಿದ್ದಾರೆ. ಬಿಜೆಪಿಗೆ ಅಧಿಕಾರ ನೀಡಿದ್ರೆ, ಯಾವುದೇ ಕಾರಣಕ್ಕೂ ಬಾಬ್ರಿ ಮಸೀದಿ ತಲೆಎತ್ತಲು ಬಿಡುವುದಿಲ್ಲ ಎಂದು ಅಬ್ಬರಿಸಿದ್ರು.

ಬಿಜೆಪಿ ಎರಡು ತಲೆ ನಾಗರಹಾವು..ಇವರಿಂದ ಬಂಗಾಳ ರಕ್ಷಿಸುತ್ತೇನೆ

ಮತ್ತೊಂದೆಡೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಕೂಡ ಟೀಕಾಪ್ರಹಾರ ನಡೆಸಿದ್ದಾರೆ. ಬೀರ್‌ಭೂಮ್, ಪೂರ್ವ ಬರ್ಧಮಾನ್, ಪಶ್ಚಿಮ ಬರ್ಧಮಾನ್, ಮತ್ತು ಬಂಕುರಾದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ಪಶ್ಚಿಮ ಬಂಗಾಳದ ಜನರನ್ನು ವಿಭಜಿಸಿ ಅವಮಾನಿಸಲು ಬಿಜೆಪಿ ಸಂಚು ರೂಪಿಸುತ್ತಿದೆ. ನನ್ನಲ್ಲಿ ಕೊನೆ ಉಸಿರಿರುವವರೆಗೂ, ಈ ನಾಡಿಗೆ ಅಥವಾ ಇಲ್ಲಿನ ಜನರಿಗೆ ಯಾವುದೇ ಹಾನಿಯಾಗಲು ಬಿಡುವುದಿಲ್ಲ. ಬಂಗಾಳ ಮತ್ತು ಅದರ ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಿಸಲು ನಾನು ಕೊನೆಯವರೆಗೂ ಹೋರಾಡುತ್ತೇನೆ ಎಂದು ನಾನು ನಿಮಗೆ ಮಾತು ಕೊಡುತ್ತೇನೆ. ನಮ್ಮ ಜನರನ್ನು ವಿಭಜಿಸಲು, ನಮ್ಮ ರಾಜ್ಯಕ್ಕೆ ಕಳಂಕ ತರಲು, ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳಲು ಸಂಚು ರೂಪಿಸುತ್ತಿರುವವರು ಯಶಸ್ವಿಯಾಗುವುದಿಲ್ಲ. ನಾವೆಲ್ಲರೂ ಒಟ್ಟಾಗಿ ನಿಂತಿರುವಾಗ ಇದು ಸಾಧ್ಯವಿಲ್ಲ. ನಮ್ಮ ಮೌಲ್ಯಗಳಿಗೆ ಬೆದರಿಕೆಯೊಡ್ಡುವ ಬಂಗಾಳ-ವಿರೋಧಿ ಜಮೀನ್ದಾರರ ವಿರುದ್ಧ ಪ್ರತಿಯೊಂದು ಜಾತಿ, ಪ್ರತಿಯೊಂದು ಸಮುದಾಯ, ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ಧರ್ಮದ ಜನರು ಒಂದೇ ಶಕ್ತಿಯಾಗಿ ನಿಲ್ಲಬೇಕೆಂದು ಎಂದು ಮಮತಾ ಕರೆ ನೀಡಿದ್ರು.

ಹೊರಬಿದ್ದ ಆಂತರಿಕ್ಷ ಸಮೀಕ್ಷೆ..ಕೇಸರಿ ಪಡೆಯಲ್ಲಿ ಗೆಲುವಿನ ಹುಮ್ಮಸ್ಸು..!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ನಡೆಸಿದ ಸರ್ವೇ ರಿಪೋರ್ಟ್‌ ಔಟ್‌ ಆಗಿದೆ. ಬಂಗಾಳದಲ್ಲಿ ದೀದಿ ಕೋಟೆ ಕೆಡವಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ಈ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ 115 ರಿಂದ 120 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವರದಿಯಾಗಿದೆ. ಚುನಾವಣಾ ಪ್ರಚಾರ ಆರಂಭಕ್ಕೂ ಮುನ್ನ ಬಿಜೆಪಿ 100 ಸ್ಥಾನ ಗೆಲ್ಲಬಹುದು ಎಂದು ರಾಜಕೀಯ ವಿಶ್ಲೇಷಕರು ಮತ್ತು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ರು. ಆದ್ರೀಗ, ಈ ಸರ್ವೇ ರಿಪೋರ್ಟ್‌ ಬಿಜೆಪಿ ಪಾಳಯದಲ್ಲಿ ಗೆಲುವಿನ ಭರವಸೆಯನ್ನು ಮತ್ತುಷ್ಟು ಹೆಚ್ಚಿಸಿದ್ದು, ಹೊಸ ಉತ್ಸಾಹ ಮೂಡಿಸಿದೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 77 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. 60 ಸ್ಥಾನಗಳಲ್ಲಿ ಅತೀ ಕಡಿಮೆ ಅಂತರಗಳಲ್ಲಿ ಸೋಲು ಕಂಡಿತ್ತು. ಈ ಬಾರಿ ಈ 60 ಸ್ಥಾನಗಳನ್ನೂ ಗೆಲ್ಲಲು ಬಿಜೆಪಿ ರಣವ್ಯೂಹ ರಚಿಸಿದೆ. ಇದರ ಭಾಗವಾಗಿ ಪ್ರಧಾನಿ ಮೋದಿ ರ್ಯಾಲಿ ಮತ್ತು ಸಮಾವೇಶಗಳ ಸಂಖ್ಯೆಗಳನ್ನೂ ಹೆಚ್ಚಿಸಲಾಗಿದೆ.

ಪಟ್ಟಿಯಿಂದ ಕೈಬಿಟ್ಟ ಮತದಾರರಿಗೆ ಸುಪ್ರೀಂಕೋರ್ಟ್‌ ನಿರಾಸೆ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ತೀವ್ರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್‌ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೆಸರು ಕೈಬಿಟ್ಟವರಿಗೆ, ಮೇಲ್ಮನವಿ ಮಂಡಳಿಯಲ್ಲಿ ವಿಚಾರಣೆ ಮುಗಿಯುವವರಗೆ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಮಧ್ಯಂತರ ಮತದಾನದ ಹಕ್ಕು ನೀಡಬೇಕು ಎಂಬ ಟಿಎಂಸಿ ಬೇಡಿಕೆಯನ್ನು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ತಳ್ಳಿಹಾಕಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಪಟ್ಟಿಯಿಂದ ಕೈಬಿಟ್ಟವರಿಗೆ ಮತ್ತು ಮೇಲ್ಮನವಿ ನ್ಯಾಯಮಂಡಳಿಗಳ ಮುಂದೆ ಇನ್ನೂ ವಿಚಾರಣೆ ಬಾಕಿ ಇರುವವರಿಗೆ, ಮಧ್ಯಂತರ ಮತದಾನದ ಹಕ್ಕು ನೀಡಲು ನಿರಾಕರಿಸಿದೆ. ವಿಚಾರಣೆಯ ಸಂದರ್ಭದಲ್ಲಿ, ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ, ಕನಿಷ್ಠ 16 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿವೆ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅರ್ಜಿದಾರರು ಈಗಾಗಲೇ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸಂಪರ್ಕಿಸಿದ್ದು, ನಮ್ಮ ಅಭಿಪ್ರಾಯದಲ್ಲಿ ಈ ಅರ್ಜಿಯಲ್ಲಿ ವ್ಯಕ್ತಪಡಿಸಿದ ಆತಂಕಗಳು ಅಪ್ರಸ್ತುತವಾಗಿವೆ. ಹೀಗಾಗಿ ಪಟ್ಟಿಯಿಂದ ಕೈಬಿಡಲಾದ ಮತದಾರರಿಗೆ ಮಧ್ಯಂತರ ಮತದಾನದ ಹಕ್ಕು ನೀಡುವಂತೆ ಕೇಳುವುದನ್ನು ಅನುಮತಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಇದರೊಂದಿಗೆ ಸುಪ್ರೀಂಕೋರ್ಟ್‌ನಲ್ಲೂ ಟಿಎಂಸಿಗೆ ದೊಡ್ಡ ಹಿನ್ನಡೆಯಾಗಿದೆ. ಆದ್ರೆ, ಇದು ಚುನಾವಣೆ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

About The Author