ನಿತೀಶ್ ಕುಮಾರ್ ನಂತರ ಬಿಹಾರ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಬಲ ಒಬಿಸಿ ನಾಯಕನ ಸಾಮ್ರಾಟ್ ಚೌಧರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಆದ್ರೆ, ಸಾಮ್ರಾಟ್ ಚೌಧರಿ ಬಿಹಾರ ಸಿಎಂ ಆಗಿ ಆಯ್ಕೆಯಾಗಿದ್ದೇಗೆ.? ಇದರ ಹಿಂದಿನ ಲೆಕ್ಕಾಚಾರಗಳೇನು..? ಗೊತ್ತಾ?
ಬಿಹಾರ ನೂತನ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಯು ನಾಯಕ ನಿತೀಶ್ ಕುಮಾರ್ ಇಂದು ರಾಜೀನಾಮೆ ಸಲ್ಲಿಸಿದ್ರು. ಇದರ ಬೆನ್ನಲ್ಲೇ, ಪಾಟ್ನಾದಲ್ಲಿ ಎನ್ಡಿಎ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಬಿಜೆಪಿಗೆ ಪಾಲಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ನಾಳೆ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಜರಾಗಲಿದ್ದಾರೆ.
ಸಾಮ್ರಾಟ್ ಚೌಧರಿ ಅವರ ಜೊತೆಗೆ, ಇಬ್ಬರು ಉಪಮುಖ್ಯಮಂತ್ರಿಗಳು ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗೀರೋದ್ರಿಂದ, ಬಿಹಾರ ಸಿಎಂ ಸ್ಥಾನ ಖಾಲಿಯಾಗಿತ್ತು. ಇದ್ರಿಂದ ನಿತೀಶ್ ಉತ್ತಾರಾಧಿಕಾರಿ ಯಾರಾಗ್ತಾರೆ ಅನ್ನೋ ಪ್ರಶ್ನೆ ಮೂಡಿತ್ತು. ಸಿಎಂ ರೇಸ್‌ನಲ್ಲಿ ಸಾಮ್ರಾಟ್ ಚೌಧರಿ ಜತೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಬಿಹಾರ್ ಸಚಿವ ದಿಲೀಪ್ ಕುಮಾರ್ ಜೈಸ್ವಾಲ್, ಬಿಜೆಪಿ ಹಿರಿಯ ನಾಯಕ ಸಂಜೀವ್ ಚೌರಾಸಿಯಾ, ಶಾಸಕಿ ಗಾಯತ್ರಿ ದೇವಿ ಹೆಸರುಗಳು ಕೇಳಿ ಬಂದಿದ್ವು. ಆದ್ರೆ, ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಸಾಮ್ರಾಟ್ ಚೌಧರಿಗೆ ಬಿಹಾರ ಸಿಎಂ ಪಟ್ಟ ಕಟ್ಟಿದೆ.
57 ವರ್ಷದ ಸಾಮ್ರಾಟ್ ಚೌಧರಿ ಹುಟ್ಟು ಬಿಜೆಪಿಗ ಏನಲ್ಲ. ಕೋರಿ ಸಮುದಾಯಕ್ಕೆ ಸೇರಿರುವ ಸಾಮ್ರಾಟ್ ಚೌಧರಿ, ನವೆಂಬರ್ 16, 1968 ರಂದು ಮುಂಗೇರ್ ಜಿಲ್ಲೆಯ ಲಖನ್‌ಪುರದಲ್ಲಿ ಜನಿಸಿದರು. ಸಾಮ್ರಾಟ್ ತಂದೆ ಶಕುನಿ ಚೌಧರಿ, 6 ಬಾರಿ ಶಾಸಕರಾಗಿ ಮತ್ತು ಸಂಸದರಾಗಿ ಸೇವೆ ಸಲ್ಲಿಸಿದ್ರು. ತಾಯಿ ಪಾರ್ವತಿ ದೇವಿ ಕೂಡ ಬಿಹಾರದ ರಾಜಕಾರಣದಲ್ಲಿ ಸಕ್ರಿಯರಾಗಿದ್ರು. ಸಾಮ್ರಾಟ್ ತಮ್ಮ ರಾಜಕೀಯ ಜೀವನವನ್ನು 1990ರ ದಶಕದಲ್ಲಿ ಆರ್‌ಜೆಡಿ ಪಕ್ಷದ ಮೂಲಕ ಪ್ರಾರಂಭಿಸಿದರು. 2000 ರಲ್ಲಿ ಪರ್ಬತ್ತಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ರಾಬ್ರಿ ದೇವಿ ಸಂಪುಟದಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸಾಮ್ರಾಟ್ ಚೌಧರಿ, ಪ್ರಸ್ತುತ ತಾರಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಸಾಮ್ರಾಟ್ ಚೌಧರಿ ಎಂಟ್ರಿಯಿಂದ ಬಿಹಾರದಲ್ಲಿ ಬಿಜೆಪಿಗೆ ಕಾಡುತ್ತಿದ್ದ ಒಬಿಸಿ ನಾಯಕತ್ವದ ಕೊರತೆ ನೀಗಿತು ಅಂದ್ರೆ ತಪ್ಪಿಲ್ಲ. ಸುಮಾರು ಏಳು ವರ್ಷಗಳ ಹಿಂದಷ್ಟೇ ಬಿಜೆಪಿಗೆ ಎಂಟ್ರಿ ನೀಡಿದ ಸಾಮ್ರಾಟ್ ಚೌಧರಿ, ಇಂದು ಬಿಹಾರದ ಹೊಸ ಸಾಮ್ರಾಟನ ಗದ್ದುಗೆ ಏರಿದ್ದಾರೆ. 2020 ರಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರದಲ್ಲಿ ಪಂಚಾಯತ್ ರಾಜ್ ಖಾತೆ ಸಚಿವರಾಗಿ ಚೌಧರಿ ಕಾರ್ಯನಿರ್ವಹಿಸಿದ್ರು. ಮಾರ್ಚ್ 2023 ರಲ್ಲಿ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಇವರನ್ನು ಬಿಹಾರ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಸ್ಥಾನ ತಂದುಕೊಟ್ಟ ಹಿನ್ನೆಲೆ ಸಾಮ್ರಾಟ್ ಚೌಧರಿ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿತ್ತು. ಬಿಜೆಪಿ ಮೈತ್ರಿ ಮುರಿದುಕೊಂಡು ಆರ್‌ಜೆಡಿ ಜತೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದ ಸಾಮ್ರಾಟ್, ಮುಂಡಾಸು ಧರಿಸಲು ಆರಂಭಿಸಿದ್ದರು. ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುವವರೆಗೂ ಅದನ್ನು ಕಳಚುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ಹಾಗಾದ್ರೆ ಸಾಮ್ರಾಟ್ ಚೌಧರಿಗೆ ಸಿಎಂ ಪಟ್ಟ ಕಟ್ಟಿದ್ದೇಕೆ ಬಿಜೆಪಿ ಹೈಕಮಾಂಡ್..?
ಲೆಕ್ಕಾಚಾರ 1 :ಜಾತೀ ಸಮೀಕರಣ
ಬಿಹಾರ ರಾಜಕೀಯ ಸಂಪೂರ್ಣ ಜಾತಿ ಆಧಾರಿತವಾಗಿದೆ. ಸಾಮ್ರಾಟ್ ಚೌಧರಿ ಕುಶ್ವಾಹಾ ಸಮುದಾಯಕ್ಕೆ ಸೇರಿದ್ದು, ಕುಶ್ವಾಹಾ ಅಥವಾ ಕೊಯೆರಿ ಬಿಹಾರದ 2ನೇ ಅತಿದೊಡ್ಡ ಸಮುದಾಯವಾಗಿದೆ. ಈ ಸಮುದಾಯದ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಅಲ್ಲದೇ, ಬಿಜೆಪಿ ಹಲವು ವರ್ಷಗಳ ಕಾಲ ಕಾಡುತ್ತಿದ್ದ ಪ್ರಬಲ ಒಬಿಸಿ ನಾಯಕನ ಸ್ಥಾನವನ್ನ ಈಗಾಗಲೇ ಸಾಮ್ರಾಟ್ ಚೌಧರಿ ತುಂಬಿದ್ದಾರೆ. ಅಲ್ಲದೇ, ದಿಗ್ಗಜ ನಾಯಕರಾದ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ನಾಯಕತ್ವವನ್ನ ಸಮರ್ಥವಾಗಿ ಎದುರಿಸಿ ತಮ್ಮ ಸಾಮರ್ಥ್ಯವನ್ನ ನಿರೂಪಿಸಿದ್ದಾರೆ. ಅಲ್ಲದೇ, ಭವಿಷ್ಯದಲ್ಲಿ ಯಾದವ್ ಸಮುದಾಯ ಹೊರತುಪಡಿಸಿ ಉಳಿದ ಹಿಂದುಳಿದ ಸಮುದಾಯಗಳನ್ನ ಸೆಳಯುವಲ್ಲಿ ಸಾಮ್ರಾಟ್ ಪ್ರಮುಖ ಪಾತ್ರವಹಿಸಲಿದ್ದಾರೆ ಅನ್ನೋದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದೆ.
ಲೆಕ್ಕಾಚಾರ 2: ಪಕ್ಷ ಸಂಘಟನಾ ಚತುರ
ಬಿಹಾರ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ತಮ್ಮ ಕಾರ್ಯ ಕ್ಷಮತೆಯನ್ನ ಸಾಬೀತುಪಡಿಸಿದ್ದಾರೆ. ಅಲ್ಲದೇ, ತಳಮಟ್ಟದಿಂದ ಪಕ್ಷವನ್ನ ಸಂಘಟಿಸಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದಲೇ ಬಿಜೆಪಿ ಹೈಕಮಾಂಡ್ ಸಾಮ್ರಾಟ್‌ರನ್ನ ಬಿಹಾರ ಬಿಜೆಪಿಯ ಭವಿಷ್ಯದ ನಾಯಕ ಎಂದು ಬಂಬಿಸಿತ್ತು.
ಲೆಕ್ಕಾಚಾರ 3: ಚುನಾವಣಾ ರಣತಂತ್ರ ನಿಸ್ಸೀಮ
ಕೇವಲ ಪಕ್ಷ ಸಂಘಟನೆ ಮತ್ತು ಆಡಳಿತಗಾರನಾಗಿ ಮಾತ್ರ ಅಲ್ಲ, ಚುನಾವಣೆ ಎದುರಿಸಲು ಬೇಕಾದ ರಣತಂತ್ರ ರಚಿಸುವಲ್ಲೂ ಸಾಮ್ರಾಟ್ ಚೌಧರಿ ನಿಸ್ಸೀಮ, ಸಾಮ್ರಾಟ್ ನೇತೃತ್ವದಲ್ಲಿ ಬಿಜೆಪಿ 2025ರ ಬಿಹಾರ ಚುನಾವಣೆಯಲ್ಲಿ ಅದ್ಭುತ ಸಾಧನೆ ಮಾಡಿತ್ತು. ಆ ಮೂಲಕ ಜೆಡಿಯು ಜೊತೆ ಸೇರಿ ಸರ್ಕಾರ ರಚನೆ ಮಾಡಿತ್ತು. ಇದರ ಎಲ್ಲಾ ಜಾತಿ, ಸಮುದಾಯಗಳನ್ನ ಸಾಮ್ರಾಟ್ ಒಟ್ಟಾಗಿ ತೆಗೆದುಕೊಂಡು ಹೋಗಬಲ್ಲರು.
ಲೆಕ್ಕಾಚಾರ 4: ಭವಿಷ್ಯದ ದೃಷ್ಟಿ
ಸಾಮ್ರಾಟ್ ಚೌಧರಿಗೆ ಬಿಹಾರ ಮುಖ್ಯಮಂತ್ರಿ ಪಟ್ಟಕ್ಕೇರಿಸಿರುವುದರ ಹಿಂದೆ ಬಿಜೆಪಿಯ ಥಿಂಕ್ ಟ್ಯಾಂಕ್‌ನ ಭವಿಷ್ಯದ ದೃಷ್ಟಿಯು ಅಡಗಿದೆ. ಮುಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿಗೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆಯಿತ್ತು. ಸಾಮ್ರಾಟ್ ಚೌಧರಿ ಆ ಅವಶ್ಯಕತೆಯನ್ನು ಪೂರೈಸಿದ್ದಾರೆ. ಇದ್ರೊಂದಿಗೆ ಮುಂದಿನ ಚುನಾವಣೆಯಗಳಲ್ಲಿ ಮೈತ್ರಿ ಬದಲು ಏಕಾಂಗಿಯಾಗಿ ಸ್ಪರ್ಧಿಸಿ, ಅಧಿಕಾರ ಹಿಡಿಯುವುದು ಬಿಜೆಪಿ ಲೆಕ್ಕಾಚಾರವಾಗಿದೆ.
10 ಬಾರಿ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಯುಗಾಂತ್ಯ
ಕಳೆದು ಎರಡು ದಶಕಗಳ ಕಾಲ ಬಿಹಾರ ಅಂದ್ರೆ ಮೊದಲು ನೆನಪಾಗುತ್ತಿದ್ದ ಹೆಸರೇ ನಿತೀಶ್ ಕುಮಾರ್, 20 ವರ್ಷಗಳ ಕಾಲ ಬಿಹಾರದ ಚುಕ್ಕಾಣಿ ಹಿಡಿದಿದ್ದ ಹಾಗೂ ಬರೋಬ್ಬರಿ 10 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಜೆಡಿಯು ನಾಯಕ ನಿತೀಶ್ ಕುಮಾರ್ ಯುಗ ಅಂತ್ಯವಾಗಿದೆ. ಮಂಗಳವಾರ ಮಧ್ಯಾಹ್ನ ತಮ್ಮ ಸಚಿವ ಸಂಪುಟ ವಿಸರ್ಜಿಸಿದ ಬಳಿಕ, ಲೋಕಭವನದಲ್ಲಿ ರಾಜ್ಯಪಾಲ ಸೈಯದ್ ಅತಾ ಹಸ್ನೇನ್ ಅವರನ್ನು ಭೇಟಿಯಾಗಿ ನಿತೀಶ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಇನ್ನು ಕಳೆದ ವಾರವಷ್ಟೇ ನಿತೀಶ್ ಕುಮಾರ್ ಅವರು ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣನಲ್ಲಿ ಪೋಸ್ಟ್ ಮಾಡಿರುವ ನಿತೀಶ್ , ತಮ್ಮ ಸರ್ಕಾರವು ಇಷ್ಟು ವರ್ಷಗಳ ಕಾಲ ನಿರಂತರವಾಗಿ ಜನರ ಸೇವೆ ಮಾಡಿದ್ದು, ನಾನೀಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಇಂದಿನ ಕ್ಯಾಬಿನೆಟ್ ಸಭೆಯ ನಂತರ, ನಾನು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಈಗ ಹೊಸ ಸರ್ಕಾರವು ರಾಜ್ಯದ ಆಡಳಿತವನ್ನು ನೋಡಿಕೊಳ್ಳಲಿದೆ. ನೂತನ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನವಿರಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಕೆಲಸಗಳು ನಡೆಯಲಿದ್ದು, ಬಿಹಾರವು ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




