Mangaluru News: 5 ವರ್ಷದ ಹಿಂದೆ ಕಾಣೆಯಾಗಿದ್ದ ಮಹಿಳೆ, ಈಗ ಸಿಕ್ಕಿತ್ತು, ಆಕೆಯ ಮಕ್ಕಳನ್ನು ಭೇಟಿಯಾಗಿದ್ದಾರೆ. ಈ ಭಾವುಕ ಸಂದರ್ಭಕ್ಕೆ ಮಂಗಳೂರಿನ ಆಶ್ರಯ ತಾಣ ಸಾಕ್ಷಿಯಾಗಿದೆ.
ಮುಂಬೈ ನಿವಾಸಿ ಅಸ್ಮಾ ಎಂಬಾಕೆ ಮನೆ ಬಿಟ್ಟು 5 ವರ್ಷಗಳಾಗಿತ್ತು. ಆದರೆ ಇದೀಗ ಅಸ್ಮಾ ಮಂಗಳೂರಿನ ಆಶ್ರಯ ತಾಣದಲ್ಲಿ ಸಿಕ್ಕಿದ್ದಾರೆ. ಈ ಆಶ್ರಯ ತಾಣಕ್ಕೆ ಭೇಟಿ ಕೊಟ್ಟ ಮಕ್ಕಳು, ತಾಯಿಯನ್ನು ತಬ್ಬಿ ಕಣ್ಣೀರು ಹಾಕಿದ್ದಾರೆ. ಕೊನೆಗೂ ತಾಯಿ ಆರೋಗ್ಯಕರ ಸ್ಥಿತಿಯಲ್ಲೇ ಸಿಕ್ಕಿದಳಲ್ಲ ಎಂದು ಖುಷಿ ಪಟ್ಟಿದ್ದಾರೆ.
ಅಸ್ಮಾ ಈ ಮೊದಲು ತಮ್ಮ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದರು. ಬಳಿಕ ಮುಂಬೈಗೆ ಬಂದು ವಾಸಿಸತೊಡಗಿದ್ದರು. ಕಾರಣಾಂತರಗಳಿಂದ ಮಾನಸಿಕ ಅಸ್ವಸ್ಥಥೆಗೆ ಒಳಗಾದಾಗ, ತನ್ನ ತವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ತಪ್ಪಿಸಿಕೊಂಡು, ಮಂಗಳೂರು ಬಂದು ಸೇರಿದ್ದರು. ಈಕೆ ಒಬ್ಬರೇ ಮಂಗಳೂರಿನಲ್ಲಿ ಓಡಾಡುತ್ತಿದ್ದಾಗ, ವೈಟ್ ಡೌಸ್ ನಿರ್ಗತಿಕ ಆಶ್ರಯ ತಾಣದ ಸಂಸ್ಥಾಪಕಿಯಾದ ಕೋರಿನ್ ರಸ್ಕೀನಾ ಇವರ ರಕ್ಷಣೆ ಮಾಡಿದರು.
ಎಷ್ಟೇ ಹುಡುಕಿದರೂ, ಎಷ್ಟೇ ಪ್ರಯತ್ನಿಸಿದರೂ ಅಸ್ಮಾ ಊರು, ಮನೆ ಬಗ್ಗೆ ಗೊತ್ತಾಗಿರಲಿಲ್ಲ. ಆದರೆ ಇತ್ತೀಚೆಗೆ ಅಸ್ಮಾ ಚೇತರಿಸಿಕೊಂಡ ಬಳಿಕ, ಆಕೆಯ ಮನೆಯ ಬಗ್ಗೆ ಆಕೆಯೇ ವಿಳಾಸ ತಿಳಿಸಿದ್ದಾರೆ. ಬಳಿಕ ಮುಂಬೈನ ಬೈಕಲಾ ಪೊಲೀಸ್ ಠಾಣೆಯಲ್ಲಿ ಸಂಪರ್ಕಿಸಿ, ಮನೆಯವರ ಸಂಪರ್ಕ ಮಾಡಿ, ಮಂಗಳೂರಿಗೆ ಕರೆಸಲಾಗಿದೆ. ಇದೀಗ ಅಸ್ಮಾ ಪತಿ, ಮಕ್ಕಳು ಮಂಗಳೂರಿಗೆ ಬಂದಿದ್ದು, ಅಸ್ಮಾ ಅವರನ್ನು ಭೇಟಿ ಮಾಡಿದ್ದಾರೆ. ಅವರನ್ನು ಮರಳಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.