ನರೇಗಲ್ ಗಲಾಟೆ ಪ್ರಕರಣದಲ್ಲಿ ಕೋಮು ಬಣ್ಣ ಬಳಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು: ಮೊಹಮ್ಮದ್ ಜಾಫರ್ ಮುಲ್ಲಾ

Haveri News: ಹಾವೇರಿ ಜಿಲ್ಲೆಯ ನರೇಗಲ್ ಗ್ರಾಮದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಈ ಘಟನೆ ಕೋಮು ಗಲಭೆಯಲ್ಲ, ವೈಯಕ್ತಿಕ ಗಲಾಟೆ ಎಂದು ಅಂಜುಮನ್ ಕಮಿಟಿ ಸ್ಪಷ್ಟನೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮನ್ ಕಮಿಟಿಯ ಕಾರ್ಯದರ್ಶಿ ಮೊಹಮ್ಮದ್ ಜಾಫರ್ ಮುಲ್ಲಾ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ನರೇಗಲ್ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಹಲವು ವರ್ಷಗಳಿಂದ ಸೌಹಾರ್ದಯುತವಾಗಿ ಬದುಕುತ್ತಿದ್ದು, ನಡೆದಿರುವುದು ಕೋಮು ಗಲಭೆಯಲ್ಲ, ವೈಯಕ್ತಿಕ ಕಾರಣದಿಂದ ಉಂಟಾದ ಗಲಾಟೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಘಟನೆಯಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಇಬ್ಬರು ಮಾತ್ರವಾಗಿದ್ದು, ಉಳಿದವರು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದವರಾಗಿದ್ದಾರೆ ಎಂದು ತಿಳಿಸಿದರು. ಈ ಪ್ರಕರಣವನ್ನು ಇಡೀ ಮುಸ್ಲಿಂ ಸಮುದಾಯದೊಂದಿಗೆ ಸಂಪರ್ಕಿಸುವುದು ಸರಿಯಲ್ಲ. ಘಟನೆಗೆ ಮುಸ್ಲಿಂ ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದರು.

ಪಟಾಕಿ ಸಿಡಿಸಿದ ಕಾರಣದಿಂದಲೇ ಗಲಾಟೆ ನಡೆದಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಕುಡುಗೋಲಿನಿಂದ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ಪರವಾಗಿ ನಿಲ್ಲುವುದಿಲ್ಲ. ಕಾನೂನು ತನ್ನ ಕೆಲಸವನ್ನು ಮಾಡಬೇಕು ಎಂಬುದೇ ನಮ್ಮ ನಿಲುವು ಎಂದು ಅಂಜುಮನ್ ಕಮಿಟಿ ಕಾರ್ಯದರ್ಶಿ ಮೊಹಮ್ಮದ್ ಜಾಫರ್ ಮುಲ್ಲಾ ಸ್ಪಷ್ಟಪಡಿಸಿದರು.

ನರೇಗಲ್ ಗಲಾಟೆ ಪ್ರಕರಣದಲ್ಲಿ ಕೋಮು ಬಣ್ಣ ಬಳಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬ ಆಗ್ರಹ ಇದೀಗ ಕೇಳಿಬಂದಿದೆ. ಅಂಜುಮನ್ ಕಮಿಟಿಯ ಈ ಸ್ಪಷ್ಟನೆ ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿದ್ದು, ಪೊಲೀಸ್ ತನಿಖೆಯಲ್ಲಿ ಏನು ಸತ್ಯ ಹೊರಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

About The Author