Dharwad News: ಧಾರವಾಡ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೊಂದು ಶಾಕಿಂಗ್ ನ್ಯೂಸ್. ಧಾರವಾಡದ ಭೇಟಿಗೆ ಮತ್ತೊಮ್ಮೆ ಪ್ರಯತ್ನಿಸಿದ್ದ ವಿನಯ್ ಕುಲಕರ್ಣಿ ಅವರಿಗೆ ನಿರಾಸೆಯಾಗಿದೆ.
ನಾಳೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದೆ. ಹೀಗಾಗಿ ಮೇಯರ್ ಚುನಾವಣೆಯಲ್ಲಿ ಮತದಾನಕ್ಕೆ ಅನುಮತಿ ಕೋರಿ ಶಾಸಕ ವಿನಯ್ ಕುಲಕರ್ಣಿ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ಕೋರ್ಟ್ ಶಾಸಕ ವಿನಯ್ ಕುಲಕರ್ಣಿ ಅವರ ಮನವಿಯನ್ನ ತಿರಸ್ಕರಿಸಿದೆ.
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರು ಆರೋಪಿಯಾಗಿದ್ದಾರೆ. ಈ ಹಿಂದೆಯೇ ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿ ಅವರ ಧಾರವಾಡ ಭೇಟಿಗೆ ಅನುಮತಿ ನಿರಾಕರಿಸಿದೆ. ಅಲ್ಲದೇ ಕೊಲೆ ಪ್ರಕರಣದ ಸಾಕ್ಷಿಯ ತಾಯಿ ಧಾರವಾಡ ಪಾಲಿಕೆಯ ಪಾಲಿಕೆ ಸದಸ್ಯರು ಆಗಿದ್ದಾರೆ. ಶಾಸಕರಾದ ಮೇಲೆ ವಿನಯ್ ಕುಲಕರ್ಣಿ ಮತ್ತಷ್ಟು ಪ್ರಭಾವಿ ನಾಯಕರಾಗಿದ್ದಾರೆ. ಹೀಗಾಗಿ ಅನುಮತಿ ನೀಡದಂತೆ ಸಿಬಿಐ SPP ಗಂಗಾಧರ ಶೆಟ್ಟಿ ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶ ಬಿ. ಜಯಂತಕುಮಾರ್ ಅವರು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಧಾರವಾಡದಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಅವರು ಭರ್ಜರಿ ಜಯ ಸಾಧಿಸಿದ್ದರು. ಬಿಜೆಪಿಯ ಅಮೃತ್ ದೇಸಾಯಿ ಅವರ ವಿರುದ್ಧ 18,037 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಚುನಾವಣೆಯಲ್ಲೂ ಕಾಂಗ್ರೆಸ್ ಕಮಾಲ್ ಮಾಡಲು ನಿರ್ಧರಿಸಿದೆ. ಈ ಭಾಗವಾಗಿ ಧಾರವಾಡದ ಭೇಟಿಗೆ ಪ್ರಯತ್ನಿಸಿದ್ದ ವಿನಯ್ ಕುಲಕರ್ಣಿ ಅವರಿಗೆ ನಿರಾಸೆಯಾಗಿದೆ.
ಹಿಂದೂ ಯುವಕನ ಕತ್ತಿಗೆ ಹಗ್ಗ ಕಟ್ಟಿ ಬೊಗಳು ಎಂದ ಯುವಕರು ಅರೆಸ್ಟ್, ಮನೆ ಧ್ವಂಸ