Political News: ಬಿಹಾರದಲ್ಲಿ ಚುನಾವಣೆ ಸಮೀಪಿಸಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಕರ್ನಾಟಕದಿಂದ ಬಿಹಾರಕ್ಕೆ ಹೋಗಿರುವ ಕಾಂಗ್ರೆಸ್ ನಾಯಕರು, ಅಲ್ಲಿ ಹಲವು ಭರವಸೆಗಳನ್ನು ನೀಡಿ ಪ್ರಚಾರ ಮಾಡಿದ್ದಾರೆ.
ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸೈಟ್ ನೀಡುವುದಾಗಿ ಹೇಳಿದ್ದು, ಈ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂದು ಗಂಟಲು ಹರಿದುಕೊಳ್ಳುವ ಕಾಂಗ್ರೆಸ್ಸಿಗರೇ.. ನಿಮ್ಮ ಢೋಂಗಿತನಕ್ಕೆ ಏನೆನ್ನಬೇಕು ? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ಧಾರೆ ಎರೆಯಲು ನಿಮ್ಮ ದೈನೇಸಿತನಕ್ಕೆ ಧಿಕ್ಕಾರ. ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್ ಗುಲಾಮಗಿರಿಗಾಗಿ ಪರಭಾಷಿಕರನ್ನು ಮತಕ್ಕಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಗರಂ ಆಗಿದೆ.
ನಮ್ಮ ರಾಜ್ಯದ ಹೆಚ್ಚು ಪಾಲು ಬಿಹಾರಕ್ಕೆ ಹೋಗುತ್ತೆ, ಅಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮಕ್ಕಳ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ನಾಲಿಗೆಗಳು ಏಕೆ ಅಪಶೃತಿ ನುಡಿಯುತ್ತಿವೆ? ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ಬೆಂಗಳೂರಿನಲ್ಲಿ ನಿವೇಶನ, ಸೈಟು ಕೊಡುವುದಾಗಿ ಆಮಿಷ ಒಡ್ಡಿದ್ದೀರಿ? ಇದು ಎಷ್ಟು ಸರಿ? ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಧಿಕ್ಕಾರ.
ಕನ್ನಡಿಗರ ತೆರಿಗೆ ದುಡ್ಡು, ಕಾಂಗ್ರೆಸ್ಸಿನ ಜಾತ್ರೆ. ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸಲು ನಿಮಗೆ ನಾಚಿಕೆ ಸಂಕೋಚ ಆಗುವುದಿಲ್ಲವೇ? ಎಂದು ಜೆಡಿಎಸ್ ವ್ಯಂಗ್ಯವಾಗಿ ಪ್ರಶ್ನಿಸಿದೆ.

