ನವೆಂಬರ್ 1 ರಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆದರೆ ಇದೇ ದಿನ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ನಾಡದ್ರೋಹಿ ಕ್ರಮ ಕೈಗೊಂಡು ‘ಕರಾಳ ದಿನ’ ಆಚರಿಸಿದ್ದರಿಂದ ವಿವಾದ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 150 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಆರೋಪದ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಪಿಎಸ್‌ಐ ಹಾವಣ್ಣ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ಎಂಇಎಸ್ ಮಾಜಿ ಶಾಸಕ ಮನೋಹರ ಕಿನೇಕರ್ ಹಾಗೂ ಶುಭಂ ಶೇಳಕೆ ಸೇರಿ ಹಲವರ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ.
ಕನ್ನಡ ರಾಜ್ಯೋತ್ಸವದ ದಿನ ಭಾಷಾ ದ್ವೇಷದ ವಿಷ ಬೀಜ ಬಿತ್ತಿದ, ದೊಂಬಿ ಎಬ್ಬಿಸುವ ಹುನ್ನಾರ ನಡೆಸಿದ ಆರೋಪಿಗಳ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಹಲವರು ಬೆಳಗಾವಿಯಿಂದ ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಬೆಳಗಾವಿ ಮಾರ್ಕೆಟ್ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಈಗ ಮರಾಠಿಗರ ಹೆಸರಿನಲ್ಲಿ ಕನ್ನಡಿಗರ ವಿರುದ್ಧ ಪ್ರಚೋದನೆ ಹುಟ್ಟುಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೆಳಗಾವಿ ಸರ್ದಾರ್ ಮೈದಾನದಲ್ಲಿ ರಾಜ್ಯೋತ್ಸವದ ವಿರುದ್ಧ ರ‍್ಯಾಲಿ ನಡೆಸಿ, ನಂತರ ಕಡಗೆ ಮರಾಠ ಮಂಡಳದಲ್ಲಿ ಕರಾಳ ದಿನ ಆಚರಿಸಿದ್ದೂ ವಿವಾದದ ಕೇಂದ್ರವಾಗಿದೆ. ಪ್ರಕರಣ ತನಿಖೆಯಲ್ಲಿದ್ದು, ಪೊಲೀಸರು ಮುಂದಿನ ಕ್ರಮಕ್ಕೆ ಸಜ್ಜಾಗಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

