ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬ್ರಿಟಿಷ್ ಸಂಸದ ಬಾಬ್ ಬ್ಲಾಕ್‌ಮನ್ ಖಂಡಿಸಿದ್ದಾರೆ. ಅಲ್ಲದೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಭಾಗವಾಗಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಭಾರತಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಂದ್ರೆ ಪಿಒಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಅಡಗುತಾಣಗಳು, ತರಬೇತಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ಕೀರ್ ಸ್ಟಾರ್ಮರ್ ಸರ್ಕಾರಕ್ಕೆ ಬ್ಲಾಕ್‌ಮನ್ ಆಗ್ರಹಿಸಿದ್ದಾರೆ.
ಇನ್ನೂ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. 9 ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ವಾಯುದಾಳಿ ನಡೆಸಿತು. ಶಾಂತಿ ಮಾತುಕತೆಗಳು ಮುಂದುವರೆದಂತೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಲು ವಿದೇಶಾಂಗ ಕಾರ್ಯದರ್ಶಿ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ..? ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ..
ಲಷ್ಕರ್-ಎ-ತೊಯ್ಬಾದಂತಹ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವಲ್ಲಿ ಪಾಕಿಸ್ತಾನ ಭಾಗಿಯಾಗಿದೆ. ಇದರ ಶಾಖೆಗಳಲ್ಲಿ ಒಂದಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ಹಿಂದೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು ಎಂದು ಬ್ರಿಟಿಷ್ ಸಂಸದ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡಿರುವ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಹಲ್ಗಾಮ್ ದಾಳಿ ಭಯಾನಕವಾಗಿದೆ..
ಇನ್ನೂ ಬ್ಲಾಕ್‌ಮನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಯುಕೆ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಯಾನಕವಾಗಿದೆ. ಭಯೋತ್ಪಾದನೆಯನ್ನು ಎದುರಿಸಲು ಬ್ರಿಟಿಷ್ ಸರ್ಕಾರ ಭಾರತ ಮತ್ತು ಪಾಕಿಸ್ತಾನ ಜೊತೆ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಮತ್ತು ಈ ಭಯೋತ್ಪಾದಕ ಬೆದರಿಕೆಯನ್ನು ಎದುರಿಸಲು ನಾವು ನಮ್ಮ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಾವೆಲ್ಲರೂ ಈಗ ಹೊಂದಿಕೊಳ್ಳಬೇಕು ಮತ್ತು ಭಯಾನಕ ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳ ಪ್ರಯತ್ನಗಳನ್ನು ಬೆಂಬಲಿಸುತ್ತಿದ್ದೇವೆ ಎಂದು ಲ್ಯಾಮಿ ಹೇಳಿದ್ದಾರೆ.
ಜಗತ್ತು ಎಚ್ಚರಗೊಳ್ಳುತ್ತಿದೆ..
ಅಲ್ಲದೆ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ಪಹಲ್ಗಾಮ್‌ನಲ್ಲಿ 26 ಅಮಾಯಕ ನಾಗರಿಕರ ಕ್ರೂರ ಹತ್ಯೆಯಿಂದ ಜಗತ್ತು ಎಚ್ಚರಗೊಳ್ಳುತ್ತಿದೆ ಎನ್ನುವ ಮೂಲಕ ಬ್ಲಾಕ್‌ಮನ್ ಅವರ ನಿಲುವನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯಾ ಶ್ಲಾಘಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನದ ಒಳಗೊಳ್ಳುವಿಕೆಯನ್ನು ಮತ್ತು ದಾಳಿಯ ಜವಾಬ್ದಾರಿಯನ್ನು ಹೊತ್ತಿರುವ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಕೊಂದ ದಿನವೇ ಆ ಹೇಯ ಕೃತ್ಯವನ್ನು ಬ್ಲಾಕ್‌ಮನ್ ಖಂಡಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಭಾರತ ಕೈಗೊಂಡ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸುವಂತೆ ತಮ್ಮ ಸರ್ಕಾರವನ್ನು ಒತ್ತಾಯಿಸಿದ್ದರು.