Friday, July 18, 2025

Latest Posts

ಭಯೋತ್ಪಾದಕರ ಬೇಟೆಗಿಳಿದ ಸೇನೆ : ಎರಡೇ ದಿನಗಳಲ್ಲಿ ಎಷ್ಟು ಉಗ್ರರ ಸಂಹಾರ ಗೊತ್ತಾ..?

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ : 

ನವದೆಹಲಿ : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಾಡರ್ ಟ್ರಾಲ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಈ ವೇಳೆ ಶ್ರೀನಗರ ಸೆಕ್ಟರ್ ಸಿಆರ್‌ಪಿಎಫ್ ಅವಂತಿಪೋರಾದ ಟ್ರಾಲ್ ಪ್ರದೇಶದ ನಾಡರ್‌ನಲ್ಲಿ ಎನ್‌ಕೌಂಟರ್ ಆರಂಭವಾಗಿತ್ತು.

ಆಪರೇಷನ್‌ ಆವಂತಿಪುರ

ಇನ್ನೂ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್‌ಕೌಂಟರ್ ಆಗಿ ಬದಲಾಯಿತು, ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವೇಳೆ ಜೈಶ್‌- ಎ- ಮೊಹಮ್ಮದ್‌ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಎನ್‌ಕೌಂಟರ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ನಡೆಸುತ್ತಿರುವ ಜಂಟಿ ಆಪರೇಷನ್‌ನಲ್ಲಿ ಕಳೆದ ಮೇ 13ರಂದು ಮೂವರು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಇನ್ನಷ್ಟು ಭಯೋತ್ಪಾದಕರಿಗಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿವೆ. ಆಪರೇಷನ್‌ ಆವಂತಿಪುರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳಾದ ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂಬ ಉಗ್ರರನ್ನು ಬಲಿಪಡೆಯಲಾಗಿದೆ.

ಎರಡೇ ದಿನಗಳಲ್ಲಿ ಆರು ಭಯೋತ್ಪಾದಕರು ಬಲಿ..

ಈಗ ಮತ್ತೆ ಮೂವರನ್ನು ಬೇಟೆಯಾಡಿರುವ ಸೇನೆ ಹಾಗೂ ಪೊಲೀಸರು ಎರಡೇ ದಿನಗಳಲ್ಲಿ ಒಟ್ಟು 6 ಭಯೋತ್ಪಾದಕರನ್ನು ಮಟ್ಟಹಾಕುವ ಮೂಲಕ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಶೋಪಿಯಾನ್ ಜಿಲ್ಲೆಯ ಕೆಲ್ಲರ್‌ನ ಶುಕ್ರೂ ಅರಣ್ಯ ಪ್ರದೇಶದಲ್ಲಿ ಮೂವರು ಭಯೋತ್ಪಾದಕರನ್ನು ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

ಆದರೆ ಇದು ಆಪರೇಷನ್ ಕೆಲ್ಲರ್ ಆಗಿ ಬದಲಾಗಿತ್ತು. ಈ ಸಮಯದಲ್ಲಿ ಭಾರತೀಯ ಸೇನೆಯು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಹತರಾದ ಭಯೋತ್ಪಾದಕರಿಗೆ ಸೇರಿದ ಬೆನ್ನು ಹೊರೆಯ ಚೀಲಗಳು ಮತ್ತು ಕೈ ಚೀಲಗಳ ಜೊತೆಗೆ ಹಲವಾರು ರೈಫಲ್‌ಗಳು, ಗ್ರೆನೇಡ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಪರೇಷನ್ ಕೆಲ್ಲರ್ ಎಂಬುದು ಭಾರತೀಯ ಸೇನೆಯು ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಮತ್ತೊಂದು ಮಿಲಿಟರಿ ಕಾರ್ಯಾಚರಣೆಯಾಗಿದ್ದು, ಇದು ದೇಶದ ಯಶಸ್ವಿ ಹಾಗೂ ಚಾಲ್ತಿಯಲ್ಲಿರುವ ಆಪರೇಷನ್ ಸಿಂಧೂರ್‌ನ ಜೊತೆಯಾಗಿಯೇ ಮುಂದುವರೆದಿದೆ.

ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಬೇಟೆ..

ಭದ್ರತಾ ಪಡೆಗಳು ಆ ಪ್ರದೇಶದ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಂಡಿವೆ. ಹತ್ಯೆಗೀಡಾದ ಉಗ್ರರ ಗುರುತು ತಕ್ಷಣಕ್ಕೆ ತಿಳಿದುಬಂದಿಲ್ಲ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು, ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ನಡೆಸಿ 100ಕ್ಕೂ ಅಧಿಕ ಭಯೋತ್ಪಾದಕರನ್ನು ಬಲಿಪಡೆದಿತ್ತು. ಅಲ್ಲದೆ ಒಂಭತ್ತು ಭಯೋತ್ಪಾದಕ ತಾಣಗಳನ್ನು ಧ್ವಂಸಗೊಳಿಸಿತ್ತು.

ಇದರ ಪ್ರತೀಕಾರವಾಗಿ ಭಾರತದ ಮೇಲೆ ಪಾಕಿಸ್ತಾನ ವಿಫಲ ದಾಳಿ ನಡೆಸಿತ್ತು. ಇದಾದ ಬಳಿಕ ಅಮೆರಿಕದ ಮಧ್ಯಸ್ಥಿಕೆಯಿಂದ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ತಿಳಿಗೊಳ್ಳುತ್ತಿದೆ. ಈ ನಡುವೆ ಕಣಿವೆ ರಾಜ್ಯದಲ್ಲಿನ ಭಯೋತ್ಪಾದನೆಯನ್ನು ಮಟ್ಟ ಹಾಕುವ ಗುರಿಯೊಂದಿಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಭಾರತೀಯ ಸೇನೆ ಈ ಕಾರ್ಯಾಚರಣೆಯನ್ನು ಕೈಗೊಂಡು ಉಗ್ರರ ಬೇಟೆಯಾಡುತ್ತಿವೆ.

- Advertisement -

Latest Posts

Don't Miss