Tuesday, July 16, 2024

Latest Posts

Ashwagandha : ಅಶ್ವಗಂಧ ಬ್ಯಾನ್ ಮಾಡಿದ ಡೆನ್ಮಾರ್ಕ್ ಸರ್ಕಾರ : ಬ್ಯಾನ್ ಆಗಲು ಕಾರಣಗಳೇನು?

- Advertisement -

ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು, ಖಿನ್ನತೆಯನ್ನು ಕಡಿಮೆ ಮಾಡುವುದು ಮೊದಲಾದ ಹತ್ತು ಹಲವಾರು ತೊಂದರೆಗಳಿಗೆ ಅಶ್ವಗಂಧ ಇನ್ನಾವುದೇ ಮೂಲಿಕೆಗಳು ನೀಡದ ಅದ್ಭುತ ಶಮನವನ್ನು ನೀಡುತ್ತದೆ.

ಅಶ್ವಗಂಧ ಮೂಲಿಕೆಯೇ ಆಗಿದ್ದರೂ ಇದನ್ನು ಔಷಧಿಗಳ ರೂಪದಲ್ಲಿ ವಿಶ್ವದಾದ್ಯಂತ ಮಾರಾಟ ಮಾಡಲಾಗುತ್ತಿದೆ. ಸಿರಪ್, ಕ್ಯಾಪ್ಸೂಲ್ ಹಾಗೂ ಪುಡಿ ಮಾದರಿಯಲ್ಲೂ ಆಯುರ್ವೇದದ ಈ ಔಷಧಿ ವಿಶ್ವದ ಹಲವು ಕಡೆ ಬಳಕೆಯಾಗುತ್ತಿದೆ. ಕೋಟ್ಯಂತರ ಮಂದಿ ಇದನ್ನು ಬಳಸುತ್ತಿದ್ದಾರೆ ಕೂಡ. ಆದರೆ ಈಗ ತಲಾತಲಾಂತರದಿಂದ ಜನ ನಂಬಿದ್ದ, ಭಾರತೀಯ ಆಯುರ್ವೇದ ಪರಂಪರೆಯಲ್ಲಿ ಹಾಗೂ ಚಿಕಿತ್ಸಾ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದ ಅಶ್ವಗಂಧವನ್ನೇ ಡೆನ್ಮಾರ್ಕ್ ಸರ್ಕಾರ ನಿಷೇಧಿಸಿದೆ.

ಹಾಗಾದ್ರೆ ಅಶ್ವಗಂಧ ಬ್ಯಾನ್ ಆಗಲು ಕಾರಣಗಳೇನು? ಆಯುಷ್ ಸಚಿವಾಲಯ ಹೇಳಿದ್ದೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ:

2020ರ ಮೇ ತಿಂಗಳಲ್ಲಿ ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ಕೊಟ್ಟ ವರದಿಯ ಆಧಾರದ ಮೇಲೆ ಈ ನಿರ್ಧಾರ ಹೊರಬಿದ್ದಿದೆ. ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪದಲ್ಲಿ ಅಶ್ವಗಂಧವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ವರದಿಯಿಂದಾಗಿ ಇದೀಗ ಸ್ವಿಡನ್, ಫಿನ್‌ಲ್ಯಾಂಡ್, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಫ್ರಾನ್ಸ್, ಟರ್ಕಿ ಹಾಗೂ ಯುರೋಪಿಯನ್ ಯೂನಿಯನ್‌ನಲ್ಲಿಯೂ ಕಳವಳ ವ್ಯಕ್ತವಾಗಿದೆ.

ಲೈಂಗಿಕ ಹಾರ್ಮೋನು ಮತ್ತು ಸಂತಾನೋತ್ಪತ್ತಿಯ ಮೇಲೆ ಅಶ್ವಗಂಧ ನಕರಾತ್ಮಕ ಪರಿಣಾಮ ಬೀರುತ್ತದೆ. ಅಶ್ವಗಂಧ ಗರ್ಭಪಾತಕ್ಕೂ ಕಾರಣವಾಗಲಿದೆ ಎಂದು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೇ, ಅಶ್ವಗಂಧವು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಥೈರಾಯ್ಡ್ ಗ್ರಂಥಿ ಮೇಲೆ ಹಾಗೂ ಲಿವರ್ ಸಮಸ್ಯೆ ಉಂಟುಮಾಡಬಹುದು ಎಂದು ಆರೋಪ ಮಾಡಲಾಗಿದೆ.
ಡೆನ್ಮಾರ್ಕ್​ನ ನಿರ್ಧಾರಕ್ಕೆ ಮತ್ತು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಗೆ ಭಾರತದ ಆಯುಷ್ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ವರದಿಯನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಆಯುಷ್ ಸಚಿವಾಲಯ ಹೇಳಿದೆ. ಅಶ್ವಗಂಧದ ಸುರಕ್ಷತೆ ಬಗ್ಗೆ 400 ಪುಟಗಳ ದಾಖಲೆಗಳಿವೆ. ವರದಿಯಲ್ಲಿ ವೈಜ್ಞಾನಿಕ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ ಎಂದು ಡೆನ್ಮಾರ್ಕ್ ಮಾಡಿರುವ ಆರೋಪವನ್ನು ಆಯುಷ್ ಸಚಿವಾಲಯ ತಳ್ಳಿ ಹಾಕಿದೆ.

ಅಶ್ವಗಂಧದ ರಫ್ತಿನಲ್ಲಿ ಇಡೀ ಜಗತ್ತಿನಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಆಯುಷ್ ಸಚಿವಾಲಯದ ಪ್ರಕಾರ, ಭಾರತ ವಿಶ್ವದ ಅತಿದೊಡ್ಡ ಅಶ್ವಗಂಧ ಉತ್ಪಾದಕ ದೇಶ. ಒಂದು ವರ್ಷಕ್ಕೆ 4 ಸಾವಿರ ಟನ್ ಅಶ್ವಗಂಧದ ಬೇರುಗಳನ್ನು ಉತ್ಪಾದನೆ ಮಾಡುತ್ತದೆ. ವಿವಿಧ ದೇಶಗಳಿಗೆ ಅಶ್ವಗಂಧ ಪೂರೈಕೆ ಮಾಡುವ ಪೈಕಿ ಭಾರತದ್ದೇ ಶೇಕಡಾ 42ರಷ್ಟು ಕೊಡುಗೆ ಇದೆ. ಹೀಗಿರುವಾಗ ಡೆನ್ಮಾರ್ಕ್ ದೇಶದ ನಿರ್ಧಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

- Advertisement -

Latest Posts

Don't Miss