Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ ಆಯೋಜಿಸಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಮಾದಕ ವ್ಯಸನಿಗಳನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಿದ್ದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಿಬಿರ ನಡೆದಿದ್ದು, ನಗರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಕಮಿಷನರೇಟ್ ವ್ಯಾಪ್ತಿಯ 15 ಪೊಲೀಸ್ ಠಾಣೆಗಳಿಂದ ವ್ಯಸನಿಗಳ ಟೆಸ್ಟ್ ಮಾಡಲಾಗಿದೆ. ಸುಮಾರು 500ಕ್ಕೂ ಹೆಚ್ಚಿನ ವ್ಯಸನಿಗಳನ್ನ ವಶಕ್ಕೆ ಪಡೆದು ಟೆಸ್ಟ್ ಮಾಡಲಾಗಿದೆ. ಸುಮಾರು 200ಕ್ಕೂ ಹೆಚ್ಚಿನ ವ್ಯಸನಿಗಳ ವರದಿಯಲ್ಲಿ ಪಾಸಿಟಿವ್ ಬಂದಿದೆ. ಬಳಿಕ ಪೊಲೀಸರು ಗಾಂಜಾ ತೆಗೆದುಕೊಳ್ಳುವವರ ಪೋಷಕರನ್ನು ಶಿಬಿರಕ್ಕೆ ಕರೆಸಿ, ಸಮಾಲೋಚನೆ ನಡೆಸಿದ್ದಾರೆ.
ಇನ್ನು ಗಾಂಜಾ ವ್ಯಸನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, ಮಾದಕ ವಸ್ತು, ವ್ಯಸನಿಗಳಿಂದ ಮುಕ್ತ ಮಾಡಲು ಈ ಕಾರ್ಯಾಚರಣೆ ಮಾಡ್ತಾ ಇದ್ದೇವೆ. ಈ ವರ್ಷ ದಾಖಲಾದ ಪೆಡ್ಲಿಂಗ್ ಪ್ರಕರಣವನ್ನು ಪರಿಶೀಲನೆ ಮಾಡಿದ್ದೇವೆ. ನಿರ್ದಿಷ್ಟವಾಗಿ ನಾವು 505 ಜನರನ್ನು ವಶಕ್ಕೆ ಪಡೆದುಕೊಂಡು ಪರೀಕ್ಷೆಗೆ ಒಳಪಡಿಸಿದ್ದೇವು. ಧಾರವಾಡ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೆವು. ಸುಮಾರು 197 ಜನರಿಗೆ ಪಾಸಿಟಿವ್ ಬಂದಿದೆ. ಶೇ 40% ರಷ್ಟು ನಾವು ಚೆಕ್ ಮಾಡಿಸಿದ ಜನರಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ ಒಟ್ಟು 46 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಅವರ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಹಿಂದೆ ಇವರ ಮೇಲೆ ಕೇಸ್ ಆಗಿದ್ರೆ ಕಸ್ಟಡಿಗೆ ಕಳಿಸುತ್ತೇವೆ. ಮೊದಲ ಬಾರಿ ಇದ್ರೆ ಪ್ರಕರಣ ದಾಖಲಿಸಿಕೊಂಡು ಸ್ಟೇಷನ್ ಬೇಲ್ ಕೊಡ್ತೇವೆ. ಇದು ಕಳೆದ 9 ತಿಂಗಳಲ್ಲಿ ನಾವು ಮಾಡಿದಂತಹ ಐದನೇ ಕಾರ್ಯಾಚರಣೆ. ಮೊದಲನೇ ಹಂತದಲ್ಲಿ 65% ಪಾಸಿಟಿವ್ ಬಂದಿತ್ತು. ನಾಲ್ಕನೇ ಹಂತದಲ್ಲಿ 28% ಬಂದಿತ್ತು. ಒಟ್ಟಾರೆ ಶಂಕಿತ 2,000 ವ್ಯಸನಿಗಳಲ್ಲಿ 1,000 ದಷ್ಟು ಪಾಸಿಟಿವ್ ಬಂದಿತ್ತು. 200ಕ್ಕೂ ಹೆಚ್ಚು ವ್ಯಾಪಾರಿಗಳನ್ನು ನಾವು ದಾಖಲಿಸಿಕೊಂಡಿದ್ದೇವೆ.
ಇವರ ಮೇಲೆ ಇನ್ನೂ ವಿವರವಾದ ತನಿಖೆ ಮಾಡಲಾಗುತ್ತೆ. ಇಲ್ಲಿಗೆ ಬಂದ ಪೋಷಕರು ಬಹಳ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಸಿಬ್ಬಂದಿಗಳು ಒಂದು ತಿಂಗಳ ಸತತ ಕಾರ್ಯಾಚರಣೆ. ಈ ವರ್ಷದ ಮೊದಲ ಅಭಿಯಾನ ಇದು, ಇನ್ನೂ ಮುಂದುವರೆಯುತ್ತೆ. ನಮ್ಮ ಸಿಬ್ಬಂದಿಗಳು ಸಾಕಷ್ಟು ಶ್ರಮ ವಹಿಸಿ ಕಾರ್ಯಾಚರಣೆ ಮಾಡಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚಿನ ಪೆಡ್ಲರ್ಸ್ ಗಳನ್ನು ಜೈಲಿಗೆ ಕಳಿಸಿದ್ದೇವೆ. ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಇವರ ಹೆಸರುಗಳು ಹೊರಬಂದಿದ್ದವು. ದುರಂತ ಅಂದ್ರೆ ಇದರಲ್ಲಿ ವಿದ್ಯಾರ್ಥಿಗಳು, ಆಟೋ ಚಾಲಕರು ಕೂಡ ಇದ್ದಾರೆ. ಗಾಂಜಾ ಬೀದರ ಮೂಲದಿಂದ ಬರ್ತಾ ಇದೆ. ತೆಲಂಗಾಣ, ಆಂಧ್ರಪ್ರದೇಶ, ರಾಜಸ್ತಾನ್, ಬೆಂಗಳೂರು ಕಡೆಗಳಿಂದ ಬಂದಿದೆ ಎಂದು ಹೇಳಿದ್ದಾರೆ.
ಕೇಶ್ವಾಪುರದಲ್ಲಿ ಗಾಂಜಾ ಸಿಕ್ಕ ಪ್ರಕರಣ ವಿಚಾರ. ಪ್ರಕರಣದಲ್ಲಿ ಹಣ ಸಿಕ್ಕಿದ್ದು ಮೇಜರ್ ಅಂತ ಬಹಳಷ್ಟು ಜನರನ್ನ ಅರೆಸ್ಟ್ ಮಾಡಿದ್ವಿ.ಅಕೌಂಟ್ ಓಪನ್ ಮಾಡೋಕೆ ಅಂತ ಹಲವು ದಾಖಲೆಗಳು ಸಿಕ್ಕಿದ್ವು. ಗಾಂಜಾ ಅಷ್ಟೇ ಅಲ್ಲದೇ ಬೇರೆ ಬೇರೆ ಮಾದಕ ವಸ್ತುಗಳ ಬಗ್ಗೆ ತನಿಖೆ ಮಾಡಿದ್ವಿ. ಶ್ರೀಮಂತ ವಿದ್ಯಾರ್ಥಿಗಳಿರುವ ಕಡೆ ಅಂದ್ರೆ ಬೆಂಗಳೂರು, ಕೇರಳ ಮೂಲ ಕಡೆಯಿಂದ ಬರ್ತಿದೆ ಅನ್ನೋ ಮಾಹಿತಿ ಬಂದಿತ್ತು. ಅದನ್ನು ಕೂಡ ಮಾಡಿ ಹಿಂದೆ ಒಂದೆರಡು ಕೇಸ್ ಕೂಡ ಮಾಡಿದ್ವಿ. ಒಟ್ಟಾರೆ ಅವಳಿ ನಗರ ಮಾದಕ ವಸ್ತು ಮುಕ್ತ ನಗರವನ್ನಾಗಿ ಮಾಡುವ ಕೆಲಸ ಮುಂದುವರಿಯುತ್ತೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.