ಬೆಂಗಳೂರು: ಸಮ್ಮಿಶ್ರ ಸರ್ಕಾರ ಜುಲೈ ತಿಂಗಳಿನಲ್ಲಿ ಹೊರಡಿಸಿರುವ ಆದೇಶಗಳನ್ನು ತಡೆ ಹಿಡಿಯಲು ಯಡಿಯೂರಪ್ಪ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳೋ ಮುನ್ನವೇ ಬಿಎಸ್ವೈ ರಾಜ್ಯಭಾರ ನಡೆಸಲು ಮುಂದಾಗಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಇನ್ನು ಕೆಲವೇ ಗಂಟೆ ಬಾಕಿಯಿರುವ ಮಧ್ಯೆಯೇ ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜುಲೈ ತಿಂಗಳಿನಿಂದ ಹೊರಡಿಸಲಾಗಿರುವ ಆದೇಶಗಳನ್ನು ತಡೆ ಹಿಡಿಯುವಂತೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ರವರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಈ ಹಿಂದೆ ಆಡಳಿತದಲ್ಲಿದ್ದ ಮೈತ್ರಿ ಸರ್ಕಾರದ ಆದೇಶಗಳನ್ನು ಯಡಿಯೂರಪ್ಪ ಅನುಮಾನಿಸಿರೋದು ಸ್ಪಷ್ಟವಾಗಿದೆ.
ರಾಜ್ಯದ ವಿವಿಧ ಕಾಮಗರಾರಿಗಳು, ವರ್ಗಾವಣೆಗೆ ಸಂಬಂಧಿಸಿದ ಪ್ರಸ್ತಾವಗಳ ಮೇಲೆ ಅನುಮೋದನೆ ಇತ್ಯಾದಿಗಳ ಕುರಿತಾದ ಸಮ್ಮಿಶ್ರ ಸರ್ಕಾರದ ಆದೇಶವನ್ನು ತಾವು ಪರಿಶೀಲನೆ ನಡೆಸಿ ಸೂಚನೆ ನೀಡುವವರೆಗೂ ತಡೆ ಹಿಡಿಯುವಂತೆ ಸಿಎಸ್ ಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.