Sandalwood News: ಬಾಳು ಬೆಳಗುಂದಿ ಉತ್ತರ ಕರ್ನಾಟಕದ ಜಾನಪದ ಲೋಕದ ಅಪ್ಪಟ ದೇಶಿ ಪ್ರತಿಭೆ. ಕೋಗಿಲೆಯಂತೆ ಹಾಡುವ ಇವರ ಕಂಠವನ್ನ ಈಗ ಇಡೀ ಕರುನಾಡೇ ಮೆಚ್ಚಿಕೊಳ್ಳುತ್ತಿದೆ. ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಈ ಸಂಗೀತದ ಕಲೆಯು ಬಾಳು ಬೆಳಗುಂದಿಯಂತಹ ಅನೇಕ ಕಲಾವಿದರಿಗೆ ಕರಗತವಾಗಿರುವ ಕಾರಣಕ್ಕೆ ಉತ್ತರ ಕರ್ನಾಟಕಕ್ಕೂ ಕಾಲಿಟ್ಟಿದೆ. ಉತ್ತರದ ಕೀರ್ತಿಈಗ ಎಲ್ಲೆಡೆ ಪಸರಿಸಲು ಈ ಯೂಟ್ಯೂಬ್ ಪ್ರತಿಭೆಗಳು ಕಾರಣವಾಗಿರುವುದು ಹೆಮ್ಮೆಯ ವಿಚಾರವಾಗಿದೆ.
ಬಾಳು ಬೆಳಗುಂದಿ ಮೂಲತಃ ಹಾವೇರಿ ಜಿಲ್ಲೆಯ ಕತ್ರಿಕೊಪ್ಪ ಎಂಬ ಹಳ್ಳಿಯವರಾಗಿದ್ದಾರೆ. ಆರಂಭದ ದಿನಗಳಲ್ಲಿ ಕುರಿ ಕಾಯುವುದರ ಜೊತೆಗೆಯೇ ಜಾನಪದ ಗೀತೆಗಳಿಗೆ ಮಾರು ಹೋದ ಇವರು ಕ್ರಮೇಣ ಸ್ವಂತ ಹಾಡುಗಳನ್ನು ರಚಿಸಿ ಗಾಯನ ಮಾಡಲು ಶುರು ಮಾಡುತ್ತಾರೆ. ಬಳಿಕ ಡಿಜಿಟಲ್ ಲೋಕದತ್ತ ಆಕರ್ಷಿತರಾದ ಬಾಳು ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಅಕೌಂಟ್ ತೆರೆದು ತಾವು ಹಾಡಿರುವ ಹಾಡುಗಳನ್ನ ಅಪ್ಲೋಡ್ ಮಾಡಲು ಪ್ರಾರಂಭ ಮಾಡುತ್ತಾರೆ. ಈ ರೀತಿಯಾಗಿ ತನ್ನ ಕಂಠ ಸಿರಿಯನ್ನ ಸಾಹಿತ್ಯಾಸಕ್ತರಿಗೆ ತಲುಪಿಸುತ್ತಿದ್ದ ಬಾಳು ಬೆಳಗುಂದಿ ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿದ್ದರು.
ಬಳಿಕ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಾಡಿನ ಜೊತೆಗೆಯೇ ಅದರ ವಿಡಿಯೋ ಚಿತ್ರೀಕರಿಸಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡುತ್ತಾರೆ. ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು ಪತ್ನಿ ಮಾಲಾಶ್ರೀಯ ಜೊತೆಗೆ ಗೀತೆಗಳನ್ನ ಶೂಟ್ ಮಾಡುವ ಇವರ ವಿಡಿಯೋಗಳು ಹಾಗೂ ಶಾರ್ಟ್‌ಗಳೂ ಸಹ ಜನರಿಗೆ ಅತ್ಯಂತ ಹತ್ತಿರವಾಗಿವೆ. ಅಲ್ಲದೆ ಇವರು ಒಂದು ವಿಡಿಯೋವನ್ನ ತಮ್ಮ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿದರೆ ಸಾಕು… ಕೆಲವೇ ಗಂಟೆಗಳಲ್ಲಿಯೇ ಅತೀ ಹೆಚ್ಚು ಜನರನ್ನ ತಲುಪಿ ಅವರ ಮನಸ್ಸನ್ನ ಗೆಲುತ್ತದೆ. ಅಷ್ಟೊಂದು ಆಕರ್ಷಕವಾದ ಸಾಹಿತ್ಯವನ್ನ ರಚಿಸುವಲ್ಲಿ ಈ ಬಾಳು ಬೆಳಗುಂದಿ ನಿಸ್ಸೀಮರಾಗಿದ್ದಾರೆ ಅನ್ನೋದನ್ನ ಅವರ ಹಾಡುಗಳೇ ನಮಗೆ ಹೇಳುತ್ತವೆ.
ಬಾಳು ಬೆಳಗುಂದಿ ಅನ್ನೋ ಹೆಸರು ಪ್ರಸ್ತುತ ಉತ್ತರ ಕರ್ನಾಟಕದ ಜಾನಪ ಲೋಕದಲ್ಲಿ ಸದ್ದು ಮಾಡುತ್ತಿರುವ ಜಾನಪದ ಶಕ್ತಿಯಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ ಇವರೀಗ ಸದ್ಯ ಜೀ ಕನ್ನಡದಲ್ಲಿ ಪ್ರತಿ ಭಾನುವಾರ ಹಾಗೂ ಶನಿವಾರ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಉತ್ತಮವಾಗಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸುವ ಮೂಲಕ ತೀರ್ಪುಗಾರರ ಹಾಗೂ ಕರ್ನಾಟಕದ ಮನೆ ಮನಗಳನ್ನ ಗೆಲ್ಲುತ್ತಿದ್ದಾರೆ. ಇನ್ನೂ ನಾನಾ ಶೈಲಿಯ ಸಾಹಿತ್ಯಗಳಿಂದ ಇವರು ರಚಿಸಿರುವ ಒಂದೊಂದು ಹಾಡುಗಳೂ ಸಹ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಆದರೆ ಬಾಳು ಬೆಳಗುಂದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಅಪ್ಲೋಡ್ ಮಾಡಿರುವ ಹಾಡುಗಳು ಕೋಟ್ಯಂತರ ವೀವ್ಸ್ ಪಡೆದಿವೆ ಅಂದ್ರೆ ಎಲ್ಲರೂ ನಂಬಲೇಬೇಕು….
ಎಸ್… 16 ಲಕ್ಷಕ್ಕೂ ಅಧಿಕ ಯೂಟ್ಯೂಬ್ ಫಾಲೋವರ್ಸ್‌ಗಳನ್ನ ಹೊಂದಿರುವ ಈ ಹಳ್ಳಿ ಹೈದ ಬಾಳು ಬೆಳಗುಂದಿಯವರ ಚಾನೆಲ್‌ನಲ್ಲಿ ಕುಣಿತಾಳೋ ಕುಣಿತಾಳೋ.. ಅನ್ನೋ ಜಾನಪದ ಹಾಡು 12 ಕೋಟಿಗೂ ಅಧಿಕ ವೀಕ್ಷಕರ ಮನಗೆದ್ದಿದ್ದು ಈ ಮೂಲಕ ಅತೀ ಹೆಚ್ಚು ವೀಕ್ಷಣೆ ಪಡೆದ ಜಾನಪದ ಗೀತೆ ಎಂಬ ಖ್ಯಾತಿ ಪಡೆದಿದೆ. ಅಲ್ದೆ ಲಂಗಾದಾವಣ್ಯಾಗ್ ಮಸ್ತ ಕಾಣತಿ ಲಾವಣ್ಯಾ… ಅನ್ನೋ ಸಖತ್ ಹೆಜ್ಜೆ ಹಾಕಿರುವ ಈ ಹಾಡೂ ಸಹ 8 ಕೋಟಿಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದಿರುವ ಗೀತೆಯಾಗಿದೆ. ಇದಲ್ಲದೆ ಕಿತ್ತ ಒಗದ ಬರಬೇಕ ಕೊಳ್ಳಾನ ತಾಳಿ, ಅಪ್ಪಗ ಹುಟ್ಟಿರ ನಾಳಿ ಅನ್ನೋ ಈ ಫೀಲಿಂಗ್ ಗೀತೆಯೂ ಸಹ ಮೂರನೇ ಸ್ಥಾನದಲ್ಲಿ ಅಂದ್ರೆ 2 ಕೋಟಿಗೂ ಅಧಿಕ ಜನರ ಮನ ಮುಟ್ಟಿದೆ.
ಇದೊಂದು ಅದ್ಭುತ ಸಾಹಿತ್ಯ ಈ ಹಾಡನ್ನ ನಾನು ದಿನಾಲೂ 20 ರಿಂದ 30 ಸಲ ಕೇಳುತ್ತೀನಿ ಅಣ್ಣಾ… ನಿಮ್ಮ ಹಾಡುಗಳು ಅಂದ್ರ ನಮಗೆ ಬಾಳ್ ಇಷ್ಟನೋಡ್ರೀ. ನಮ್ಮ ಉತ್ತರ ಕರ್ನಾಟಕ ಸಾಹಿತ್ಯಕ್ಕೆ ಇನ್ನೂ ಬರಗಾಲ ಬಂದಿಲ್ಲ ಅನ್ನೋದು ನೀನು ಮತ್ತೊಂದು ಸಲ ತೋರಿಸಿಕೊಟ್ಟಿದೀಯಾ ಅಭಿನಂದನೆಗಳು ನಿಮಗೆ ಎಂಬಂತಹ ತರಹೇವಾರಿ ಕಾಮೆಂಟ್‌ಗಳು ಸಹ ಈ ಗೀತೆಗೆ ವ್ಯಕ್ತವಾಗಿವೆ. ಇನ್ನೂ ಹಿಂಗ್ ನಗಬ್ಯಾಡ್, ಎದೆಯಾಗ ಎಳತಾವ ಹುಳಾ… ಈ ಹಾಡೂ ಸಹ 2 ಕೋಟಿಗಿಂತಲೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಅಲ್ದೆ ನಾನು ಯಾವತ್ತೂ ಜಾನಪದ ಹಾಡುಗಳನ್ನ ಕೇಳೋದಿಲ್ಲ ಅಣ್ಣಾ, ಆದರ ನಿಮ್ಮ ಹಾಡು ಕೇಳಿದ ಮ್ಯಾಲ್ ನಾನು ದಿನಾ ಜಾನಪದ ಹಾಡಾ ಕೇಳದೇ ನಿದ್ದಿನ ಮಾಡಾಂಗಿಲ್ಲ ಅಣ್ಣಾ. ಶಬ್ಬೀರ ಡಾಂಗೆಯವರ ಹಾಡುಗಳನ್ನ ಬಿಟ್ರ ನಿಮ್ಮೂನ ಹಾಡಾ ಕೇಳಾತೀವಿ ನೋಡ್ರಿ, ಅಂದ್ರು ನಿಮ್ಮ ಹಾಡುಗಳು ಒಟ್ಟ ಸೂಪರ್ ಅದಾವು ನೋಡ್ರಿ. ಕೇಳಕೊಂತ ಕುಂತ್ರ ಮಸ್ತ್ ಇರ್ತಾವ್ ನೋಡ್ರಿ ಎಂದೆಲ್ಲ ಅಭಿಮಾನಿಗಳು ಬಾಳು ಬೆಳಗುಂದಿಯವರ ಹಾಡುಗಳ ಬಗ್ಗೆ ತಮ್ಮ ಪ್ರೀತಿ ಅಭಿಮಾನ ತೋರುತ್ತಿದ್ದಾರೆ.
ಇನ್ನೂ ಸೋಷಿಯಲ್ ಮೀಡಿಯಾ ತುಂಬೆಲ್ಲ ಸಖತ್ ಹವಾ ಸೃಷ್ಟಿಸಿರುವ ಬಾಳು ಬೆಳಗುಂದಿ ಕರ್ನಾಟಕದಾದ್ಯಂತ ತಮ್ಮ ಜಾನಪದ ಹಾಡುಗಳ ಮೂಲಕವೇ ಜನರಿಗೆ ಚಿರ ಪರಿಚಿತರಾಗಿದ್ದಾರೆ. ನಿಂತ ಸ್ಥಳದಲ್ಲಿಯೇ ಕ್ಷರ್ಣಾಧದಲ್ಲಿಯೇ ಪದಗಳನ್ನ ಪೋಣಿಸಿ ಸಾಹಿತ್ಯ ರಚಿಸುವ ಇವರ ಈ ಕಲೆಗೆ ಚಿತ್ರರಂಗದ ಖ್ಯಾತನಾಮರೇ ನಿಬ್ಬೆರಗಾಗಿದ್ದಾರೆ. ಅಲ್ದೆ ಯಾವುದೇ ದಣಿವು, ಆಯಾಸವಿಲ್ಲದೆ ಅತ್ಯಂತ ಸರಾಗವಾಗಿ ಇಂಪಾಗಿ ಹಾಡುವ ಇವರ ಧ್ವನಿಯೂ ಸಹ ಕೋಟ್ಯಂತರ ಜನರ ಕಿವಿಗಳನ್ನ ತಂಪಾಗಿಸಿದೆ. ಈ ಜಾನಪದ ಜಾದುಗಾರ ಬಾಳು ಬೆಳಗುಂದಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿರುವ ಅನೇಕ ಹಾಡುಗಳಿಗೆ ಜನರು ತಮ್ಮದೇ ಆದ ಅಭಿಮಾನ ಪೂರ್ವಕ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.
ಒಟ್ನಲ್ಲಿ ಅಂಕಗಳನ್ನೇ ಬದುಕಿನ ಮಾನದಂಡವನ್ನಾಗಿಸಿರುವ ಈ ಸಮಾಜದಲ್ಲಿ ತಮ್ಮ ಅಸಾಮಾನ್ಯ ಕಲೆಯಿಂದ ಇಡೀ ಕರುನಾಡೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಸಾಮಾನ್ಯ ಕುರಿ ಗಾಹಿ, ಹಳ್ಳಿ ಹೈದ ಬಾಳು ಬೆಳಗುಂದಿ ಮಾತ್ರ ನಿಜಕ್ಕೂ ಜಾನಪದ ಲೋಕವನ್ನ ಬೆಳಗುತ್ತಿರುವ ಮೋಡಿಗಾರ ಅಂದ್ರೆ ತಪ್ಪಾಗಲಾರದು….