ಬಿಪಿಎಲ್ ಕಾರ್ಡ್ನ ಪುರುಷರಿಗಾದರೂ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ವಿಜಯಪುರ ನಗರದ ಹೊರವಲಯದ ಹೈವೇಯಲ್ಲಿ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಯತ್ನಾಳ್, ಗ್ಯಾರಂಟಿ ಯೋಜನೆ ಜಾರಿಗೆ ತಂದು ಸರ್ಕಾರದ ಖಜಾನೆ ಖಾಲಿಯಾಗಿದೆ. ಇದೀಗ ಗ್ಯಾರಂಟಿ ಯೋಜನೆ ಅರ್ಧಕ್ಕೆ ಬಂದ್ ಮಾಡಿದರೆ ಅಪಾಯ ಎಂದು ಮುಂದುವರಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆ ಪೂರ್ವ ರಾಹುಲ್ ಗಾಂಧಿ ಟಕಟಕಾ ಎಂದು ಭರವಸೆ ನೀಡಿದ್ದರು. ಈಗ ಟಕಟಕ ಕೊಡ್ತಿರೋ ಪಟಾಪಟ್ ಕೊಡಬೇಕೋ ಎಂದು ಮಹಿಳೆಯರು ರಾಹುಲ್ ಗಾಂಧಿಯನ್ನ ಕೇಳಬೇಕು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಹಗಲು ದರೋಡೆ ನಡೆಸುತ್ತಿದೆ. ಎಲ್ಲಾ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ, ಜಮೀನು ಹಗರಣ ನಡೆಯುತ್ತಿದೆ. ಕಂದಾಯ ಇಲಾಖೆ ಸಚಿವರ ಕ್ಷೇತ್ರದಲ್ಲಿ ಕೋಟಿ ಕೋಟಿ ಬೆಲೆ ಜಮೀನು ನಕಲಿ ದಾಖಲೆ ಮೂಲಕ ಬೇರೆಯವರಿಗೆ ನೀಡಲಾಗಿದೆ. ಇದರಲ್ಲಿ ಇಬ್ಬರು ಸಚಿವರು ಭಾಗಿಯಾಗಿದ್ದಾರೆ. ಈ ಕುರಿತು ನಾನು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇನೆ. ನಕಲಿ ದಾಖಲೆ ಜಮೀನು ಕಬಳಿಕೆ ಕುರಿತು ತನಿಖೆ ಮಾಡಬೇಕ. ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಗಜಕೇಸರಿ ಯೋಗ ಎಂದು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹಣ ವಸೂಲಿ ಮಾಡಿದ್ದಾರೆ. ಆದರೆ ವ್ಯಾಪಾರಸ್ಥರು ಹೆದರಿ ಬಾಯಿ ಬಿಡುತ್ತಿಲ್ಲ. ಜನರಲ್ಲಿ ಭಯ ಹುಟ್ಟಿಸಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ದಿವಾಳಿಯಾಗಿದೆ. ಅನುದಾನ ಇಲ್ಲದೆ ಅಭಿವೃದ್ಧಿ ಇಲ್ಲದೇ ಆಡಳಿತ ಪಕ್ಷದ ಶಾಸಕರು ರೋಸಿಹೋಗಿದ್ದಾರೆ. ಸರ್ಕಾರದ ವಿರುದ್ಧ ಅವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ, ಡಿಸಿಎಂ ಹಣ ನೀಡುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ. ಸಿಎಂ ಸಿದ್ದರಾಮಯ್ಯಗೆ ಆಡಳಿತ ಮಾಡಲು ಆಗದಿದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂಗಳ ಮೇಲೆ ಹಲ್ಲೆ, ಕೊಲೆಗಳಾಗುತ್ತಿವೆ. ಇಷ್ಟಾದರೂ ಮತಬ್ಯಾಂಕ್ ಆಸೆ ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು.