ವಿವಿಐಪಿ ಬಾಕ್ಸ್‌ನಲ್ಲಿ ಕೂತು ಉಚಿತವಾಗಿ ತಿಂಡಿ ತಿನ್ನಲು ಅಭಿಮಾನಿಗಳ ಭಾವನೆಯನ್ನೇ ಮಾರಿಕೊಂಡಿರಿ: ನಿಖಿಲ್

Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ವರ್ಗಾವಣೆಯಾಗಿದೆ. ಅಲ್ಲಿನ ಕ್ರೀಡಾಂಗಣ ಬೃಹತ್ ಆಗಿದ್ದು, ಹೆಚ್ಚು ಜನ ಕೂರುವ ಅರ್ಹತೆ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, 10000 ಉಚಿತ ಟಿಕೆಟ್‌ಗಳಿಗಾಗಿ ಕಾಂಗ್ರೆಸ್ ನಾಯಕರು ಬೇಡಿಕೆ ಇರಿಸಿದ್ದರು ಎಂದಿದ್ದಾರೆ.

ಈ ಬಗ್ಗೆ ಕಿಡಿಕಾರಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಬಾಯಲ್ಲೇ ಕೇಳಿ. ಕಾಂಗ್ರೆಸ್ ಸರ್ಕಾರ “ಕ್ರೀಡಾಂಗಣದ ಸಾಮರ್ಥ್ಯ”ದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ (VVIP) ಬಳಗಕ್ಕಾಗಿ ಬರೋಬ್ಬರಿ 10,000 ಉಚಿತ ಟಿಕೆಟ್‌ಗಳಿಗಾಗಿ ಇವರು ಬೇಡಿಕೆಯಿಟ್ಟಿದ್ದರು! ಇದರಲ್ಲಿ 900 ಟಿಕೆಟ್‌ಗಳು ಶಾಸಕರಿಗೆ ಹಾಗೂ 700 ಟಿಕೆಟ್‌ಗಳು ಸರ್ಕಾರಕ್ಕೆ ಬೇಕಿತ್ತಂತೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

ರಿಯಾಯಿತಿ ದರದಲ್ಲಿ ಸರ್ಕಾರದಿಂದ ಜಮೀನು ಪಡೆದ ಕೆಎಸ್‍ಸಿಎ ಸವಲತ್ತುಗಳನ್ನು ಅನುಭವಿಸುತ್ತಿದೆ, ಆದರೆ ಇಲ್ಲಿನ ವ್ಯವಸ್ಥೆ ಮಾತ್ರ ಸಾಮಾನ್ಯ ಅಭಿಮಾನಿಗಳನ್ನು “ಡೈನಾಮಿಕ್ ಪ್ರೈಸಿಂಗ್” ಹೆಸರಲ್ಲಿ ಲೂಟಿ ಮಾಡುತ್ತಿದೆ. ನೀವು ಕೇವಲ ಪಂದ್ಯವನ್ನಷ್ಟೇ ಸ್ಥಳಾಂತರಿಸಿಲ್ಲ, ನಿಮ್ಮ ಲಜ್ಜೆಗೆಟ್ಟ ತನವನ್ನು ಇಡೀ ದೇಶಕ್ಕೆ ಪ್ರದರ್ಶಿಸಿದ್ದೀರಿ ಎಂದು ನಿಖಿಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣ ಅಭಿಮಾನಿಗಳ ಆಸ್ತಿಯೇ ಹೊರತು ನಿಮ್ಮ ಖಾಸಗಿ ಪಾರ್ಟಿ ಹಾಲ್ ಅಲ್ಲ! ವಿವಿಐಪಿ ಬಾಕ್ಸ್‌ನಲ್ಲಿ ಕೂತು ಉಚಿತವಾಗಿ ತಿಂಡಿ ತಿನ್ನಲು ಅಭಿಮಾನಿಗಳ ಭಾವನೆಯನ್ನೇ ಮಾರಿಕೊಂಡಿರಿ. ಬೆಂಗಳೂರಿನ ಜನತೆ ಈ ದ್ರೋಹವನ್ನು ಎಂದಿಗೂ ಮರೆಯುವುದಿಲ್ಲ! ಎಂದು ನಿಖಿಲ ಕುಮಾರ್ ಕಿಡಿಕಾರಿದ್ದಾರೆ.

About The Author