Belagavi News: ಬೆಳಗಾವಿ: ಬುಧವಾರ ನಾಡಿನಾದ್ಯಂತ ಗಣೇಶನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಾವೇ ಗಣಪತಿ ಮೂರ್ತಿಯನ್ನು ಎತ್ತಿಕೊಂಡು ತಮ್ಮ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಮತ್ತೊಮ್ಮೆ ಭಾವೈಕ್ಯತೆ ಮೆರೆದಿದ್ದಾರೆ.
ನಗರದ ರಾಣಿ ಚೆನ್ನಮ್ಮ ವೃತ್ತದ ಬಳಿಯ ಗಣೇಶ ಮಂದಿರದಲ್ಲಿ ಅವರು ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ತಾವೇ ಹೊತ್ತುಕೊಂಡು ಜಿಲ್ಲಾಧಿಕಾರಿ ಕಚೇರಿಯತ್ತ ಹೆಜ್ಜೆ ಹಾಕಿದರು. ಈ ವೇಳೆ ‘ಗಣಪತಿ ಬಪ್ಪಾ ಮೋರಿಯಾ’ ಘೋಷಣೆ ಮೊಳಗಿಸಿದರು. ದಾರಿಯುದ್ದಕ್ಕೂ ಪಟಾಕಿ ಸಿಡಿಸಲಾಯಿತು.
ನಂತರ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿಯಿಂದ ನಮಸ್ಕರಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮತ್ತು ಜಿಲ್ಲಾಧಿಕಾರಿಗಳ ಕುಟುಂಬಸ್ಥರು, ಕಚೇರಿ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳು ಹಣೆ ಮೇಲೆ ತಿಲಕ, ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದು ವಿಶೇಷವಾಗಿತ್ತು. ತಾವೊಬ್ಬ ಮುಸ್ಲಿಂ ಧರ್ಮಕ್ಕೆ ಸೇರಿದರೂ ಅನ್ಯ ಧರ್ಮದ ಆಚರಣೆಗಳನ್ನು ಗೌರವಿಸಿ ಆರಾಧಿಸುತ್ತೇನೆ ಎಂಬ ಸಂದೇಶ ಸಾರಿದರು. ಹಿಂದಿನ ವರ್ಷವೂ ಕೂಡ ಅವರು ತಮ್ಮ ಕಚೇರಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿದ್ದರು.