ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆಯ (ballari mahanagara palike) ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ (Congress) ವಶಪಡಿಸಿಕೊಂಡಿದ್ದು, ಮೇಯರ್ ಆಗಿ 34ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು (M. Rajeshwari Subbarayudu), ಉಪಮೇಯರ್ ಆಗಿ 37ನೇ ವಾರ್ಡ್‌ನ ಮಾಲನ್ ಬೀ (Malan Bee) ಆಯ್ಕೆಯಾಗಿದ್ದಾರೆ. ಪಾಲಿಕೆಯ ಒಟ್ಟು 39 ವಾರ್ಡ್‌ಗಳಲ್ಲಿ ಕಾಂಗ್ರೆಸ್ 21, ಬಿಜೆಪಿಯ 13, ಐವರು ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಪಾಲಿಕೆ ಚುನಾವಣೆ ನಡೆದು 11 ತಿಂಗಳಾದರೂ ಮೇಯರ್, ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಎರಡು ಬಾರಿ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ಮುಂದೂಡಿಕೆಯಾಗಿತ್ತು. ಇದೀಗ ಬದಲಾದ ಶನಿವಾರ ಮೀಸಲಾತಿಯೊಂದಿಗೆ ಮೇಯರ್ ಮತ್ತು ಉಪಮೇಯರ್ ಸೇರಿ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ರಾಜೇಶ್ವರಿ, ಉಪಮೇಯರ್ ಸ್ಥಾನಕ್ಕೆ ಮಾಲನ್ ಬೀ ಹಾಗೂ ಬಿಜೆಪಿಯಿಂದ ಮೇಯರ್ ಹುದ್ದೆಗೆ ಸುರೇಖಾ ಮಲ್ಲನಗೌಡ, ಉಪಮೇಯರ್ ಹುದ್ದೆಗೆ ಗೋವಿಂದರಾಜಲು ನಾಮಪತ್ರ ಸಲ್ಲಿಸಿದ್ದರು. ಪಕ್ಷದ 21 ಸದಸ್ಯರು ಹಾಗೂ ಐವರು ಪಕ್ಷೇತರ ಸದಸ್ಯರೊಂದಿಗೆ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಪಾಲಿಕೆಯಲ್ಲಿ ಬಹುಮತ ಇಲ್ಲ ಎಂಬುದು ಗೊತ್ತಿದ್ದೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸಚಿವ ಶ್ರೀರಾಮುಲು ಆಪರೇಷನ್‌ಗೆ (Sriramulu Operation) ಕೈ ಹಾಕುವುದಿಲ್ಲ ಎನ್ನುತ್ತಿದ್ದರೆ, ಶಾಸಕ ಸೋಮಶೇಖರ್ ರೆಡ್ಡಿ (Lawyer Somashekhar Reddy) ಬೆಂಬಲ ನೀಡಿದವರಿಗೆ ಉಪಮೇಯರ್ ಹುದ್ದೆ ನೀಡಲಾಗುವುದು ಎಂದು ಬಹಿರಂಗವಾಗಿ ಆಮಿಷ ಒಡ್ಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಆಪರೇಷನ್ ಕಮಲದ ಭಯದಿಂದ ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಪಕ್ಷ ತನ್ನ ಸದಸ್ಯರನ್ನು ರೆಸಾರ್ಟ್‌ಗೆ (resort) ಕರೆದೊಯ್ದು ಹಿಡಿದಿಟ್ಟುಕೊಂಡಿತ್ತು. ಶನಿವಾರ ನಡೆದ ಮೇಯರ್ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್‌ನ ಸದಸ್ಯರು ನೇರವಾಗಿ ರೆಸಾರ್ಟ್‌ನಿಂದ ಬಂದು ಪಾಲ್ಗೊಂಡಿದ್ದರು. ಚುನಾವಣಾ ಅಧಿಕಾರಿಯಾಗಿ ಕಲಬುರಗಿ ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್ ಕಾರ್ಯನಿರ್ವಹಿಸಿದರು. ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಎಡಿಸಿ ಮಂಜುನಾಥ, ಶಾಸಕರಾದ ಬಿ. ನಾಗೇಂದ್ರ, ಜಿ. ಸೋಮಶೇಖರ್ ರೆಡ್ಡಿ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಎಂಎಲ್‌ಸಿ ಅಲ್ಲಂ ವೀರಭದ್ರಪ್ಪ ಇತರರಿದ್ದರು.