Sunday, September 8, 2024

Latest Posts

ಮದುವೆಯಾಗಿ ನೋಂದಾಯಿಸಿಕೊಂಡಿದ್ದ ಪ್ರೇಮಿಗಳನ್ನು ದೂರಮಾಡಿದ ಬಳ್ಳಾರಿ ಪೊಲೀಸರು!

- Advertisement -

Bellary News: ಬಳ್ಳಾರಿ: ಮದುವೆಯಾಗಿ ನೋಂದಾಯಿಸಿಕೊಂಡಿದ್ದ ಪ್ರೇಮಿಗಳನ್ನು ಬಳ್ಳಾರಿ ಪೊಲೀಸರು ದೂರ ಮಾಡಿದ್ದಾರೆ. ಯುವತಿ ಕಾಣೆಯಾಗಿದ್ದಾಳೆ ಎಂಬ ದೂರಿನಿಂದ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

ಅವರಿಬ್ಬರು ಕಾಲೇಜಿನ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆ ದಿನಗಳಿಂದಲೇ ಒಂದಾಗಿ ಬದುಕುವ ಕನಸು, ಕಾನೂನು ಪ್ರಕಾರ ಮದುವೆಗೆ ಅರ್ಹ ವಯಸ್ಸಿಗೆ ಬರುವ ತನಕ ಕಾದು ಮದುವೆ ಆಗಿದ್ದರು. ಬಳಿಕ ನೋಂದಣಿ ಸಹ ಮಾಡಿಸಿದ್ದರು. ಇನ್ನೇನೂ ನಮ್ಮ ಬದುಕು ನಿರಾಳ ಎಂದುಕೊಂಡಿದ್ದ ದಂಪತಿಯನ್ನು ಪೊಲೀಸರೇ ದೂರ ಮಾಡಿದ್ದಾರೆ.

ಯುವತಿ ಕಾಣೆಯಾಗಿದ್ದಾಳೆ ಎಂಬ ದೂರಿನ ಕಾರಣಕ್ಕೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಜೋಡಿಯನ್ನು ಇದೀಗ ಬೇರೆ ಮಾಡಿದ್ದಾರೆ. ಇದಕ್ಕೆ ಕಾರಣ ಜಾತಿಯ ವಿಚಾರ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯುವತಿಯ ಪೋಷಕರು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.

ಏನಿದು ಘಟನೆ..?; ಬಳ್ಳಾರಿಯ ಕಾರ್ತಿಕ್ ಎಂಬ ಯುವಕ ಸಿರುಗುಪ್ಪದ ಶಾನವಾಸಪುರದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅಲ್ಲದೇ ಕಾನೂನಾತ್ಮಕವಾಗಿ ನೋಂದಣಿ ಸಹ ಮಾಡಿಸಿಕೊಂಡು, ನೆಮ್ಮದಿಯಾಗಿ ಜೀವನ ಮಾಡುತ್ತಿದ್ದರು. ಹೀಗಿರುವಾಗ ಏಕಾಏಕಿ ಹುಡುಗಿ ಕಾಣೆಯಾಗಿದ್ದಾಳೆ ಎಂಬ ದೂರೊಂದು ಬಳ್ಳಾರಿ ಮಹಿಳಾ ಠಾಣೆಯಲ್ಲಿ ದಾಖಲಾಗುತ್ತದೆ. ಬಳಿಕ ಹರಪನಹಳ್ಳಿ ಬಳಿಯ ಹಳ್ಳಿಯೊಂದರಲ್ಲಿದ್ದ ಈ ಜೋಡಿಯನ್ನು ಪೊಲೀಸರು ಪತ್ತೆಮಾಡಿ ಬಳ್ಳಾರಿಗೆ ಕರೆದುಕೊಂಡು ಬಂದಿದ್ದಾರೆ.

ಈ ವೇಳೆ ದಂಪತಿ ಬಳ್ಳಾರಿಗೆ ಬಂದರೆ ತಮ್ಮನ್ನು ಯುವತಿಯ ಮನೆಯವರು ಬೇರೆ ಮಾಡುತ್ತಾರೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಹರಪನಹಳ್ಳಿ ಠಾಣೆಯಲ್ಲೇ ಮಾಹಿತಿ ಪಡೆಯುವಂತೆ ತಿಳಿಸಿದ್ದಾರೆ. ಸೂಕ್ತ ಭದ್ರತೆ ಕೊಡುವ ಭರವಸೆ ನೀಡಿ ಕರೆದುಕೊಂಡು ಬಂದ ಪೊಲೀಸರು ಯುವತಿಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳಿಸಿದ್ದಾರೆ.

ಯುವಕ ಕಾರ್ತಿಕ್‍ಗೆ ಜೀವ ಬೆದರಿಕೆ ಇದೆ. ನಾವು ಇದನ್ನೂ ಬಿಟ್ಟು ಏನು ಮಾಡಲು ಆಗುವುದಿಲ್ಲ. ಹಾಗಾಗಿ ನೀನು ಸ್ವಲ್ಪ ದಿನಗಳ ಕಾಲ ಸುಮ್ಮನಿರು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಯುವಕ ಒಪ್ಪಿ ಪೊಲೀಸರ ಸಹಕಾರಕ್ಕೆ ಕಾಯುತ್ತಾನೆ. ಇನ್ನೆನೋ ಪೊಲೀಸರು ತಮ್ಮಿಬ್ಬರನ್ನು ಒಂದು ಮಾಡುತ್ತಾರೆ ಎಂದು ನಂಬಿದ್ದ ಜೋಡಿಯ ಭರವಸೆ ಈಗ ಸುಳ್ಳಾಗಿದೆ.

ಕೊನೆಗೆ ಕಾರ್ತಿಕ್ ಸಮಾಜದ ಮುಖಂಡರನ್ನು ಸಂಪರ್ಕ ಮಾಡಿದ್ದಾನೆ. ಆಗ ಎಚ್ಚೆತ್ತುಕೊಂಡ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಕಾರ್ತಿಕ್‍ನನ್ನು ಕರೆದು ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಎಂದು ದಿನ ಪೂರ್ತಿ ಕಾಯಿಸಿದ್ದಾರೆ. ಕೊನೆಗೆ ಒಂದು ಪತ್ರ ಕೊಟ್ಟು ಕೌಲ್ ಬಜಾರ್ ಪೊಲೀಸ್ ಠಾಣೆಗೆ ಹೋಗಿ, ಸಂಜೆ 6 ಗಂಟೆ ವೇಳೆಗೆ ನಿಮ್ಮ ಪತ್ನಿ ನಿಮ್ಮ ಜೊತೆ ಬರುತ್ತಾರೆ ಎಂದಿದ್ದಾರೆ. ಇದರ ನಡುವೆ ಯುವತಿ ತನ್ನ ತವರು ಮನೆ ಸೇರಿದ್ದಾಳೆ.

ಸಾಂತ್ವನ ಕೇಂದ್ರದಲ್ಲಿದ್ದ ಕಾರ್ತಿಕ್ ಪತ್ನಿ ಹೋಗಿದ್ದು ಹೇಗೆ ಎಂಬ ಪ್ರಶ್ನೆಗೆ ಪೊಲೀಸರ ಬಳಿ ಉತ್ತರ ಇಲ್ಲ. ಪತ್ನಿಯನ್ನು ಭೇಟಿಯಾಗಲು ಅವಕಾಶ ಮಾಡಿಕೊಡಿ ಎಂಬ ಯುವಕನ ಪ್ರಶ್ನೆಗೆ ಪೊಲೀಸರು ನೋಡೋಣ ಎಂಬ ಉತ್ತರ ಕೊಟ್ಟು ಕಳಿಸಿದ್ದಾರೆ. ಕಾನೂನಾತ್ಮಕವಾಗಿ ಮದುವೆಯಾಗಿದ್ದ ಜೋಡಿಯನ್ನು ವಿಚ್ಛೇದನವಿಲ್ಲದೆ ದೂರಮಾಡಿದ್ದು ಹೇಗೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಧಾರವಾಡದಲ್ಲಿ ರೈತ ಬೆಳೆದ ಬೆಳೆಗೆ ವಾಮಾಚಾರ

Market : ವರ್ಷವಾದರು ಹಂಚಿಕೆಯಾಗದ ಮಾರುಕಟ್ಟೆ ಮಳಿಗೆ : ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು

ಕಲಬುರಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ: CID ತನಿಖೆ ಮಾಡುತ್ತಾರೆ ಎಂದ ಗೃಹಸಚಿವರು..

- Advertisement -

Latest Posts

Don't Miss