Bengaluru News: “ಬದುಕಿನಲ್ಲಿ ರಾಜಯೋಗವೂ ಇರಬೇಕು. ಜೊತೆಗೆ ಕೌಶಲ್ಯವೂ ಇರಬೇಕು. ಪದವಿ ಜೊತೆಗೆ ಕೌಶಲ್ಯ ಅತ್ಯಂತ ಮುಖ್ಯವಾದುದು. ಕೌಶಲ್ಯವು ಉದ್ಯೋಗ, ಆದಾಯ ಮತ್ತು ಗೌರವಕ್ಕೆ ದಾರಿ ಮಾಡಿಕೊಡಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬುಧವಾರ ನಡೆದ ಬೆಂಗಳೂರು ಕೌಶಲ್ಯ ಶೃಂಗಸಭೆ- 2026ರಲ್ಲಿ ಭಾಗವಹಿಸಿ ಮಾತನಾಡಿದರು. “ಕೌಶಲ್ಯವೇ ಒಂದು ಧರ್ಮ, ಪದವಿ ಜ್ಞಾನದ ಬಾಗಿಲು ತೆಗೆಯುತ್ತೆ. ಕೌಶಲ್ಯ ಯಶಸ್ಸಿನ ದಾರಿ ತೋರಿಸುತ್ತೆ. ಪ್ರತಿಭೆ ಓದಿನಿಂದ ಬರಬಹುದು. ಕೌಶಲ್ಯ ಪರಿಶ್ರಮದಿಂದ ಬರುತ್ತದೆ. ಇಂದಿನ ಯುವಕರ ಕೈಗಳಿಗೆ ಕೌಶಲ್ಯ ನೀಡಿದರೆ, ನಾಳಿನ ಕರ್ನಾಟಕದ ಭವಿಷ್ಯ ಅವರ ಕೈಯಲ್ಲಿರುತ್ತದೆ. ಭವಿಷ್ಯಕ್ಕಾಗಿ ಇಂದೇ ಸಿದ್ಧತೆ ಮಾಡಿಕೊಳ್ಳುವವರೇ ಭವಿಷ್ಯವನ್ನು ರೂಪಿಸುತ್ತಾರೆ” ಎಂದು ಹೇಳಿದರು.
“ನಾಳೆಯ ಅವಕಾಶಗಳಿಗಾಗಿ ನಮ್ಮ ಯುವಜನರನ್ನು ಇಂದೇ ಸಿದ್ಧಗೊಳಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ. ಶಿಕ್ಷಣ ಜ್ಞಾನವನ್ನು ನೀಡುತ್ತದೆ. ಕೌಶಲ್ಯ ಆ ಜ್ಞಾನವನ್ನು ಅವಕಾಶ, ಆದಾಯ ಮತ್ತು ಗೌರವವನ್ನು ತಂದು ಕೊಡುವುದಕ್ಕೆ ಪರಿವರ್ತನೆ ಮಾಡಲಿದೆ” ಎಂದು ತಿಳಿಸಿದರು.
2032ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
“ಕರ್ನಾಟಕವು 2032ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯತ್ತ ಸಾಗುತ್ತಿದೆ. ಆದರೆ ಬಂಡವಾಳವೊಂದೇ ಈ ಭವಿಷ್ಯವನ್ನು ನಿರ್ಮಿಸಲಾರದು. ಅದನ್ನು ನಿರ್ಮಿಸೋದಕ್ಕೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಅತ್ಯಗತ್ಯ” ಎಂದರು.
“ಇಡೀ ಪ್ರಪಂಚ ಬೆಂಗಳೂರಿನ ಕಡೆ ನೋಡುತ್ತಿದೆ. ನಮ್ಮ ರಾಜ್ಯ ಪ್ರತಿಭಾವಂತರ ನಾಡು. ಇದು ಪ್ರಧಾನಿ ಮೋದಿ ಸೇರಿದಂತೆ ಅನೇಕರ ಮಾತು. 1.3 ಮಿಲಿಯನ್ ಐಟಿ ಉದ್ಯೋಗಿಗಳು ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2.6 ಮಿಲಿಯನ್ ಜನರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಕರ್ನಾಟಕದ ಶಕ್ತಿ. ಜಾಗತಿಕ ನಾಯಕರು ಮೊದಲು ಬರುವುದೇ ಬೆಂಗಳೂರಿಗೆ. ನಂತರ ಇತರೆಡೆ ಹೋಗುತ್ತಾರೆ” ಎಂದರು.
“13,940 ವೈದ್ಯರನ್ನು ಕರ್ನಾಟಕ ತಯಾರು ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇತರೇ ದೇಶಗಳಿಗಿಂತ ಸಾಕಷ್ಟು ಮುಂದಿದ್ದೇವೆ. ಕರ್ನಾಟಕದ ಜನಸಂಖ್ಯೆಯ ಶೇ. 65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನಾವು ಹೊಂದಿರುವ ಯುವಜನರು ಜನಸಂಖ್ಯೆಯ ಅನುಕೂಲದ ಜೊತೆಗೆ ನಮ್ಮ ಅತ್ಯಂತ ದೊಡ್ಡ ಜವಾಬ್ದಾರಿಯೂ ಹೌದು” ಎಂದರು.
“ನಮ್ಮ ಗುರಿ ಕೇವಲ ಉದ್ಯೋಗ ಹುಡುಕುವವರನ್ನು ಸೃಷ್ಟಿಸುವುದಲ್ಲ. ಉದ್ದಿಮೆ ಪ್ರಾರಂಭ ಮಾಡುವವರನ್ನು, ಭವಿಷ್ಯ ರೂಪಿಸುವವರನ್ನು, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಯುವಜನರನ್ನು ರೂಪಿಸುವುದು ನಮ್ಮ ಗುರಿ. ಕರ್ನಾಟಕದಲ್ಲಿ ಈಗಾಗಲೇ ಸುಮಾರು 550 ಜಾಗತಿಕ ಸಾಮರ್ಥ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2029ರ ವೇಳೆಗೆ ಸುಮಾರು 500 ಹೊಸ ಕೇಂದ್ರಗಳು ಮತ್ತು 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ಈ ಅವಕಾಶಗಳು ಬರುವ ಮೊದಲೇ ನಮ್ಮ ಕೌಶಲ್ಯಾಭಿವೃದ್ಧಿ ವ್ಯವಸ್ಥೆಯನ್ನು ನಾವು ತಯಾರು ಮಾಡುತ್ತಿದ್ದೇವೆ. ನಮ್ಮ ಯುವಜನರನ್ನು ಕೇವಲ ಉದ್ಯೋಗಗಳಿಗಾಗಿ ಸಿದ್ಧಪಡಿಸುತ್ತಿಲ್ಲ. ನಾಳಿನ ಜಗತ್ತಿಗಾಗಿ ಸಿದ್ಧಪಡಿಸುತ್ತಿದ್ದೇವೆ” ಎಂದು ಹೇಳಿದರು.
“ನಮ್ಮ ಸರ್ಕಾರವು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನೀತಿ 2025–32ರ ಮೂಲಕ ಬಲವಾದ ಅಡಿಪಾಯ ಹಾಕಿದೆ. ಈ ನೀತಿಯು ಕರ್ನಾಟಕದ ಕೌಶಲ್ಯಾಭಿವೃದ್ಧಿ ಪ್ರಯತ್ನಗಳನ್ನು ಒಂದೇ ಸಮಗ್ರ ವ್ಯವಸ್ಥೆಯಡಿ ತರುತ್ತದೆ. ಮುಂದಿನ ಏಳು ವರ್ಷಗಳಲ್ಲಿ ಸುಮಾರು 30 ಲಕ್ಷ ಫಲಾನುಭವಿಗಳನ್ನು ತಲುಪುವುದು ನಮ್ಮ ಉದ್ದೇಶ. ಇದಕ್ಕಾಗಿ ಅಂದಾಜು 5 ಸಾವಿರ ಕೋಟಿ ಹೂಡಿಕೆ ಮಾಡುವ ಉದ್ದೇಶ ನಮ್ಮದು” ಎಂದರು.
“ಬಲಿಷ್ಠ ಸಂಸ್ಥೆಗಳು, ಆಕರ್ಷಕ ವೃತ್ತಿಪರ ಶಿಕ್ಷಣ, ಸಾಂಪ್ರದಾಯಿಕ ಕೌಶಲ್ಯಗಳು, ಧೀರ್ಘಕಾಲದ ಕಲಿಕೆ, ಭವಿಷ್ಯದ ಕೌಶಲ್ಯಗಳು, ಗುಣಮಟ್ಟ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ವೃತ್ತಿಪರ ಕೌಶಲ್ಯ ಶಿಕ್ಷಣವು ನಮ್ಮ ಯುವಜನರ ಮೊದಲ ಆಯ್ಕೆಯಾಗಬೇಕು. ಬೇರೆ ದಾರಿ ಇಲ್ಲದಾಗ ಆಯ್ಕೆ ಮಾಡುವ ಪರ್ಯಾಯವಾಗಬಾರದು” ಎಂದು ಹೇಳಿದರು.
ಸುಬ್ರತೋ ಬಾಗ್ಚಿ ಅವರಿಗೆ ಕೌಶಲ್ಯಾಭಿವೃದ್ಧಿ ವಿಷನ್ ಗ್ರೂಪ್ ಅಧ್ಯಕ್ಷತೆ
“ಕರ್ನಾಟಕದ ಕೌಶಲ್ಯಾಭಿವೃದ್ಧಿಯ ಭವಿಷ್ಯಕ್ಕೆ ಮಾರ್ಗದರ್ಶನ ನೀಡಲು ನಮ್ಮ ಸರ್ಕಾರವು ಕೌಶಲ್ಯಾಭಿವೃದ್ಧಿ ವಿಷನ್ ಗ್ರೂಪ್ ಅನ್ನು ರಚಿಸಿದೆ. ಮೈಂಡ್ಟ್ರೀ ಸಂಸ್ಥೆಯ ಸಹ-ಸ್ಥಾಪಕರಾದ ಸುಬ್ರೋತೋ ಬಾಗ್ಚಿ ಅವರು ಈ ಮಹತ್ವದ ಸಮಿತಿಯ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡಿರುವುದು ನನಗೆ ಸಂತೋಷ ತಂದಿದೆ” ಎಂದು ಅಭಿನಂದನೆಗಳನ್ನು ತಿಳಿಸಿದರು.
“ಉದ್ಯಮ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದ ಅನೇಕ ಗಣ್ಯರು ಈ ಸಮಿತಿಯಲ್ಲಿ ಅವರೊಂದಿಗೆ ಕೈಜೋಡಿಸಿದ್ದಾರೆ. ಬಾಗ್ಚಿ ಅವರು ಅಪಾರ ಅನುಭವ ಹೊಂದಿರುವ ಪ್ರತಿಭಾವಂತರು. ಒಡಿಶಾದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ನಾಯಕತ್ವ ನೀಡಿ, ಬಲಿಷ್ಠ ಸಂಸ್ಥೆಗಳನ್ನು ನಿರ್ಮಿಸಿ, ಆ ರಾಜ್ಯದ ಯುವಜನರಿಗೆ ನೆರವಾಗಿದ್ದಾರೆ” ಎಂದು ಹೇಳಿದರು.
“ನಾವು ಯಾವುದೋ ಮಾದರಿಯನ್ನು ಅನುಕರಿಸಲು ಬಂದಿಲ್ಲ. ಇತರರು ಅಧ್ಯಯನ ಮಾಡಲು ಬಯಸುವ ಕರ್ನಾಟಕದ ಸ್ವಂತ ಮಾದರಿಯನ್ನು ನಿರ್ಮಿಸಲು ಬಯಸುತ್ತೇವೆ. ವಿಷನ್ ಗ್ರೂಪ್ ನಮ್ಮ ಯುವಜನರು ಕರ್ನಾಟಕದಲ್ಲಿ, ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ನಾಳೆಯ ಉದ್ಯೋಗಗಳಿಗೆ ಸಿದ್ಧರಾಗುವಂತೆ ದೂರದೃಷ್ಟಿಯೊಂದಿಗೆ ಮಾರ್ಗದರ್ಶನ ನೀಡಲಿದೆ” ಎಂದು ಹೇಳಿದರು.
ಏಳು ವರ್ಷಗಳಲ್ಲಿ 7 ಲಕ್ಷ ತರಬೇತಿ ಗುರಿ
“ನಮ್ಮ ಪ್ರಮುಖ ಯೋಜನೆಯಾದ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ 2.0 ಅಡಿಯಲ್ಲಿ ತರಬೇತಿ, ಹಿಂದಿನ ಕಲಿಕೆಯ ಮಾನ್ಯತೆ (Recognition of Prior Learning – RPL) ವಿಶೇಷ ಯೋಜನೆಗಳು, ಉದ್ಯೋಗ ನಿಯೋಜನೆ ನೆರವು ಮತ್ತು ಡಿಜಿಟಲ್ ಆಡಳಿತವನ್ನು ಒಂದೇ ಚೌಕಟ್ಟಿನಡಿ ತರಲಾಗಿದೆ. ಈ ಯೋಜನೆಯಡಿ ಏಳು ವರ್ಷಗಳಲ್ಲಿ 7 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಇದರಲ್ಲಿ ಪ್ರತಿ ವರ್ಷ ಸುಮಾರು 75,000 ಅಭ್ಯರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಲಾಗುವುದು” ಎಂದರು.
“ಸಮಾವೇಶಕ್ಕೆ ಬಂದಿರುವ ಅನೇಕರಿಗೆ ನಾನು ಮನವಿ ಮಾಡುತ್ತೇನೆ. ನಾವೆಲ್ಲರೂ ಒಟ್ಟಾಗಿ, ಜೊತೆಗೂಡಿ ಕೆಲಸ ಮಾಡೋಣ. ನಿಮ್ಮ ಆಲೋಚನೆ, ಚಿಂತನೆಯನ್ನು ನಮ್ಮ ಜೊತೆ ಹಂಚಿಕೊಳ್ಳಿ. ಇದು ನಿಮ್ಮ ಕರ್ನಾಟಕ ರಾಜ್ಯ. ನಿಮ್ಮ ಸರ್ಕಾರ ಸದಾ ನಿಮ್ಮ ಜೊತೆಗಿದೆ. ಯುವಶಕ್ತಿಯನ್ನು ನಾವು ಬೆಳೆಸೋಣ” ಎಂದರು.
“ಬೆಂಗಳೂರಿನ ಹೊರಗಡೆ ಉದ್ಯೋಗ ಸೃಷ್ಟಿ ಮಾಡಿದರೆ. ಆ ಉದ್ದಿಮೆಗಳಿಗೆ ಪ್ರತಿ ಉದ್ಯೋಗ ಸೃಷ್ಟಿಗೆ 2,500 ರೂಪಾಯನ್ನು ಪ್ರತಿ ತಿಂಗಳು ನೀಡುತ್ತೇವೆ. ಪ್ರತಿ ಹಳ್ಳಿಯಲ್ಲೂ ಪ್ರತಿಭೆಗಳಿದ್ದಾರೆ. ಅವರನ್ನು ನಾವು ಗುರುತಿಸಿ ಬೆಳೆಸಬೇಕು. ನನ್ನ ವೃತ್ತಿ, ನನ್ನ ಆಯ್ಕೆ ಯೋಜನೆಯ ಮೂಲಕ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಬಗ್ಗೆ ತಿಳಿದುಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿದ್ದೇವೆ” ಎಂದು ತಿಳಿಸಿದರು.
ಕರ್ನಾಟಕದಲ್ಲಿ ಈ ವರ್ಷ 30 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ. ಮೆಡಿಕಲ್ ಸೀಟುಗಳು ಸಹ ಭರ್ತಿಯಾಗದೇ ಉಳಿದಿವೆ. ರಾಜ್ಯದಲ್ಲಿ ಏನಿಲ್ಲ ಎಂದರು 250ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ಐಟಿಐ, ಜಿಟಿಟಿಸಿ ಕಾಲೇಜುಗಳಿವೆ. 1 ಲಕ್ಷಕ್ಕೂ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು ರಾಜ್ಯದಿಂದ ಹೊರಬರುತ್ತಿದ್ದಾರೆ. ಅನೇಕ ಎಂಜಿನಿಯರಿಂಗ್ ಪದವೀಧರರು ಕೆಲಸಕ್ಕಾಗಿ ನನ್ನ ಬಳಿ ಬರುತ್ತಾರೆ. ಇನ್ಫೋಸಿಸ್ ಸಂಸ್ಥೆಯಲ್ಲೂ ಅನೇಕರಿಗೆ ಕೆಲಸ ದೊರೆಯುತ್ತಿಲ್ಲ. ಇದಕ್ಕೆ ಕೌಶಲ್ಯವೇ ದಾರಿಯಾಗಬೇಕು” ಎಂದರು.
“ಉದ್ದಿಮೆದಾರರು ಸಬಲಗೊಂಡಷ್ಟು ಕರ್ನಾಟಕ ಪ್ರಬಲವಾಗುತ್ತದೆ. ಯುವಶಕ್ತಿ ಕಲಿಕೆಯ ಜೊತೆಗೆ ಕೌಶಲ್ಯ ಯೋಜನೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಪಡೆದುಕೊಳ್ಳಬಹುದು. ಕೌಶಲ್ಯಯುತ ಯುವಜನಾಂಗ, ಬಲಿಷ್ಠ ಕರ್ನಾಟಕ, ಜಾಗತಿಕವಾದ ಅವಕಾಶಗಳೇ ನಮ್ಮ ಗುರಿ” ಎಂದು ಹೇಳಿದರು.




