ಕೇಂದ್ರ ಸಚಿವ ಸಾಲು ಸಾಲು ಹಳೆಯ ಹೇಳಿಕೆ ದಾಖಲಿಸಿ, ವಾಗ್ದಾಳಿ ನಡೆಸಿದ ಸಚಿವ ಚಲುವರಾಯಸ್ವಾಮಿ

Political News: ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪೋಲೀಸ್ ಅಧಿಕಾರಿಯನ್ನು ಹೆಡ್ ಕ್ಲರ್ಕ್ ಎಂದು ಕರೆದಿದ್ದು, ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ಅವರೇ, ಎಡಿಜಿಪಿ ದರ್ಜೆಯ ಹಿರಿಯ ದಕ್ಷ ಪೊಲೀಸ್ ಅಧಿಕಾರಿಯನ್ನು ‘ಹೆಡ್ ಕ್ಲರ್ಕ್’ ಎಂದು ನಿಂದಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ? ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಸ್ಥಾನದಲ್ಲಿದ್ದ ಅಧಿಕಾರಿಗಳೇ ನಿಮಗೆ ಭದ್ರತೆ ಕೊಟ್ಟಿದ್ದರು, ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಿದ್ದರು ಎಂಬುದನ್ನು ಅಧಿಕಾರದ ಮದದಲ್ಲಿ ಮರೆತುಬಿಟ್ಟಿರಾ? ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹಾಗೂ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ದಿನಕ್ಕೊಂದು ಪತ್ರಿಕಾ ಗೋಷ್ಠಿ ನಡೆಸಿ, ಅನಗತ್ಯ ಪ್ರಚಾರ ಪಡೆಯುವುದೇ ನಿಮ್ಮ ರಾಜಕೀಯ ಬದುಕಿನ ಕಾಯಕವಾಗಿದೆ. ನಿಮ್ಮಂಥವರು ಹೊಣೆಗೇಡಿತನದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದಾಗ, ಆ ಜಾಗದಲ್ಲಿ ಪ್ರಿಯಾಂಕ್ ಖರ್ಗೆ ಅವರೇ ಇರಲಿ ಅಥವಾ ಬೇರೆ ಯಾರೇ ಗೃಹ ಸಚಿವರಿದ್ದರೂ ನಿಮ್ಮ ಕೆಟ್ಟ ನಡವಳಿಕೆಗೆ ತಕ್ಕ ಪ್ರತ್ಯುತ್ತರ ನೀಡಲೇಬೇಕಾಗುತ್ತದೆ.

ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ದಿನಬೆಳಗಾದರೆ ತನಿಖಾ ಸಂಸ್ಥೆಗಳನ್ನು, ಪ್ರಾಮಾಣಿಕ ಅಧಿಕಾರಿಗಳನ್ನು ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ಹೀಗಳೆಯುವ ಕುತಂತ್ರಿ ರಾಜಕಾರಣಕ್ಕೆ ಇತಿಹಾಸದಲ್ಲಿ ಯಾರೂ ಇಳಿದಿರಲಿಲ್ಲ. ಅಧಿಕಾರಿ ವರ್ಗದ ನೈತಿಕ ಸ್ಥೈರ್ಯ ಕುಗ್ಗಿಸುವ ನಿಮ್ಮ ಈ ಬೇಜವಾಬ್ದಾರಿ ರಾಜಕಾರಣವನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ. ಮೊದಲು ಸಾರ್ವಜನಿಕವಾಗಿ ಮಾತನಾಡುವ ಘನತೆ ಮತ್ತು ಮರ್ಯಾದೆಯನ್ನು ಬೆಳೆಸಿಕೊಳ್ಳಿ ಎಂದು ಚಲುವರಾಯಸ್ವಾಮಿ ಸಲಹೆ ನೀಡಿದ್ದಾರೆ.

“ಕಾಂಗ್ರೆಸ್ ಸರಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದು, ಹಳ್ಳಿಯ ಹೆಣ್ಣು ಮಕ್ಕಳ ಬದುಕು ಏನಾಗಬೇಕು ಎಂಬುದರ ಕುರಿತು ಯೋಚನೆ ಮಾಡಬೇಕಾಗಿದೆ” ಎಂದವರು ನೀವೇ ಅಲ್ಲವೇ?…. ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ರೈತ ಮಹಿಳೆಗೆ “4 ವರ್ಷ ಎಲ್ಲಿ ಮಲಗಿದ್ದೆ” ಎಂದು ಕೇಳಿದ ಸ್ವಯಂ ಘೋಷಿತ ಮಣ್ಣಿನ ಮಗ ನೀವೇ ಅಲ್ಲವೇ?! “ಬಡತನದ ಕಾರಣದಿಂದ, ತಿನ್ನಲು ಎರಡು ಹೊತ್ತು ಊಟ ಸಿಗದ ಕಾರಣ ಯುಕವರು ಸೈನ್ಯಕ್ಕೆ ಸೇರುತ್ತಾರೆ” ಎನ್ನುವ ಹೇಳಿಕೆ ನೀಡಿ ಛೀಮಾರಿ ಹಾಕಿಸಿಕೊಂಡವರು ತಾವೇ ಅಲ್ಲವೇ?!

ಕೆಲವರಿಗೆ ಕೆಟ್ಟ ಮೇಲಾದರೂ ಬುದ್ದಿ ಬರುತ್ತದೆ. ಆದರೆ, ನಿಮಗೆ ನಿಮ್ಮ ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತ ಬರುವುದು ಸಾಧ್ಯವೇ ಇಲ್ಲ ಎನ್ನುವುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದೀರಿ. ಕೇಂದ್ರದಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕೆ ಇಲಾಖೆಯಂತಹ ದೊಡ್ಡ ಹುದ್ದೆ ಸಿಕ್ಕಿರುವಾಗ ನಿಮ್ಮನ್ನು ಆರಿಸಿ ಕಳುಹಿಸಿದ ಮಂಡ್ಯ ಮತ್ತು ಕರ್ನಾಟಕಕ್ಕೆ ಒಳಿತಾಗುವಂತಹ ಕೆಲಸವನ್ನು ಮಾಡುವುದನ್ನು ಬಿಟ್ಟು ಪ್ರತಿನಿತ್ಯ ಪತ್ರಿಕಾಗೋಷ್ಠಿ ನಡೆಸಿ ಪೊಳ್ಳು ಭಾಷಣ ಬಿಗಿದರೆ ಕೊನೆ ಪಕ್ಷ ನಿಮ್ಮನ್ನು ನಂಬಿರುವವರಿಗೂ ನಯಾ ಪೈಸೆ ಲಾಭವಿಲ್ಲ ಎಂದು ಚೆಲುವರಾಯಸ್ವಾಮಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author