Bengaluru: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ; ಸಾವಿರಾರು ಭಕ್ತರು ಭಾಗಿ

Bengaluru: ಬೆಂಗಳೂರು, ಅ.24: ಮಹಾಲಕ್ಷ್ಮಿ ಲೇಔಟ್ ಮಹಾಗಣಪತಿ ಸೇವಾ ಸಂಘದ ವತಿಯಿಂದ ಮಹಾಲಕ್ಷ್ಮೀ ಲೇಔಟ್ ನ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ಆಯೋಜಿಸಿರುವ ಭವ್ಯ ಗಣೇಶೋತ್ಸವ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಶನಿವಾರ ಮೂರನೇ ದಿನದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಉತ್ಸವದ ಪ್ರಮುಖ ಘಟ್ಟವಾದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ‘ಗೋವಿಂದ, ಗೋವಿಂದ’ ಎಂಬ ನಾಮಸ್ಮರಣೆ ಮಾಡುತ್ತಾ ದೇವರ ಕೃಪೆಗೆ ಪಾತ್ರರಾದರು. ಸುಮಾರು 10 ಸಾವಿರ ಭಕ್ತರಿಗೆ ತಿರುಪತಿ ಲಡ್ಡುಗಳನ್ನು ಉಚಿತವಾಗಿ ವಿತರಿಸಲಾಯಿತು.

ಸೇವಾ ಸಂಘದ ಅಧ್ಯಕ್ಷರು ಹಾಗೂ ಕೆಪಿವೈಸಿಸಿ ರಾಜ್ಯಾಧ್ಯಕ್ಷರಾದ ಎಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, “ಧಾರ್ಮಿಕ ಉತ್ಸವಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ಮಹತ್ವದ ವೇದಿಕೆಗಳಾಗಿವೆ. ಇಂತಹ ಕಾರ್ಯಕ್ರಮಗಳು ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಪರಸ್ಪರ ಪ್ರೀತಿ, ಗೌರವ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸುತ್ತವೆ,” ಎಂದ ಅವರು, ಉತ್ಸವದ ಯಶಸ್ಸಿಗೆ ಸಹಕರಿಸಿದ ಭಕ್ತಾದಿಗಳು, ಸಾರ್ವಜನಿಕರು, ಕಲಾವಿದರು ಹಾಗೂ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಸೇವಾ ಸಂಘದ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎಸ್. ಕೇಶವಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕೆಪಿಸಿಸಿ ಸಂಯೋಜಕ ರವಿ (ಗುಟ್ಟಹಳ್ಳಿ) ಸೇರಿದಂತೆ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಶನಿವಾರ ಬೆಳಗ್ಗೆ ಮಹಾಲಕ್ಷ್ಮಿ ಲೇಔಟ್ ನ ರಾಜಬೀದಿಗಳಲ್ಲಿ ಸಾಗಿದ ತಿರುಪತಿ ತಿರುಮಲ ಶ್ರೀವಾರಿ ಶ್ರೀ ವೆಂಕಟೇಶ್ವರ ರಥೋತ್ಸವಕ್ಕೆ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಯಿತು. ನೂರಾರು ಕೋಲೆ ಬಸವ, ನಾದಸ್ವರ ಡೋಲು ಸೇರಿದಂತೆ ನಾನಾ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸಾಗಿದ ರಥೋತ್ಸವದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ‘ಗೋವಿಂದ ಗೋವಿಂದ’ ಎಂಬ ನಾಮಸ್ಮರಣೆ ಮಾಡುತ್ತಾ ದೇವರ ಕೃಪೆಗೆ ಪಾತ್ರರಾದರು.

About The Author