Dharwad News: ಮಳೆಯ ಕೊರತೆಯ ನಡುವೆಯೂ ಸೀಗೆ ಹುಣ್ಣಿಮೆ ಸಂಭ್ರಮ

Dharwad News: ಧಾರವಾಡ ಜಿಲ್ಲೆ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕು ಸೇರಿದಂತೆ ವಿವಿಧ ಭಾಗಗಳ ಗ್ರಾಮೀಣ ಪ್ರದೇಶಗಳಲ್ಲಿ ಸೀಗೆ ಹುಣ್ಣಿಮೆ ಹಬ್ಬದ ಸಂಭ್ರಮ ಮನೆಮಾಡಿದೆ. ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದರೂ, ತಲೆತಲಾಂತರಗಳಿಂದ ಬಂದ ಸಂಪ್ರದಾಯವನ್ನು ಮುಂದುವರಿಸಿ ಭೂಮಿತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಮಣ್ಣಿನ ಮೇಲಿನ ಪ್ರೀತಿ, ಕೃಷಿ ಸಂಸ್ಕೃತಿಯ ಪ್ರತೀಕವಾಗಿರುವ ಈ ಹಬ್ಬದ ವಿಶೇಷ ವರದಿ ಇಲ್ಲಿದೆ.

ಮಳೆಗಾಗಿ ಕಾದಿರುವ ರೈತರು..!

ಒಂದೆಡೆ ಮಳೆಯ ಕೊರತೆಯ ನೋವು.. ಮತ್ತೊಂದೆಡೆ ಭೂಮಿತಾಯಿಯ ಮೇಲಿನ ಅಚಲ ನಂಬಿಕೆ..!

ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಕಂಡುಬಂದ ಸೀಗೆ ಹುಣ್ಣಿಮೆಯ ಸಂಭ್ರಮ.

ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲೂಕು ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಲ್ಲಿ ಸೀಗೆ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಕೃಷಿಯನ್ನೇ ಬದುಕಾಗಿಸಿಕೊಂಡಿರುವ ರೈತರು, ಮಳೆಯ ಕೊರತೆಯ ನಡುವೆಯೂ ತಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ.

ಸೀಗೆ ಹುಣ್ಣಿಮೆಯ ಅಂಗವಾಗಿ ಎತ್ತುಗಳನ್ನು ಸಿಂಗರಿಸಿ, ಕುಟುಂಬ ಸಮೇತ ಹೊಲಗಳಿಗೆ ತೆರಳುವ ರೈತರು, ಭೂಮಿತಾಯಿಗೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸುತ್ತಾರೆ.

ಹೊಲದಲ್ಲಿರುವ ಐದು ಕಲ್ಲುಗಳನ್ನು ಪಾಂಡವರು ಎಂದು ಪೂಜಿಸುವುದು, ಬನ್ನಿ ಮರದ ಹಿಂದೆ ಇರುವ ಮತ್ತೊಂದು ಕಲ್ಲನ್ನು ಕಳ್ಳ ಪಾಂಡವ ಎಂದು ಕರೆಯುವುದು ಇಲ್ಲಿನ ವಿಶೇಷ ಸಂಪ್ರದಾಯ. ಈ ಕಲ್ಲುಗಳಿಗೆ ವಿಭೂತಿ, ಸುಣ್ಣ ಹಾಗೂ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಗುತ್ತದೆ.

ನಂತರ ಚರಗದ ಆಚರಣೆಯ ಮೂಲಕ ಹೊಲಗಳಿಗೆ ಪೂಜೆ ಸಲ್ಲಿಸಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸುತ್ತಾರೆ.

“ಮಳೆ ಇಲ್ಲದಿರುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದೇವೆ. ಆದರೂ ನಮ್ಮ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವನ್ನು ಮರೆಯದೆ ಸೀಗೆ ಹುಣ್ಣಿಮೆ ಆಚರಿಸಿದ್ದೇವೆ. ಭೂಮಿತಾಯಿಗೆ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದ್ದೇವೆ. ಉತ್ತಮ ಮಳೆಯಾಗಿ, ಬೆಳೆ ಚೆನ್ನಾಗಿ ಬಂದು ರೈತರ ಬದುಕು ಹಸನಾಗಲಿ ಎಂಬುದು ನಮ್ಮ ಆಶಯ.”

ಪೂಜೆ ಮುಗಿದ ಬಳಿಕ ಹೊಲವೇ ಊಟದ ಮನೆಯಾಗಿ ಬದಲಾಗುತ್ತದೆ..!

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ವಿವಿಧ ಬಗೆಯ ಪಲ್ಯಗಳು, ಚಟ್ನಿ, ಶೇಂಗಾ ಹೋಳಿಗೆ, ಕರಿಗಡಬು ಸೇರಿದಂತೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಕುಟುಂಬದವರು ಹಾಗೂ ಸ್ನೇಹಿತರು ಒಟ್ಟಿಗೆ ಕುಳಿತು ಊಟ ಸವಿಯುತ್ತಾರೆ.

ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರೆ, ಹಿರಿಯರು ಹಬ್ಬದ ಸಂಪ್ರದಾಯ ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಸೀಗೆ ಹುಣ್ಣಿಮೆ ಹಬ್ಬವು ರೈತರಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ, ಕೃಷಿ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ವೇದಿಕೆಯಾಗಿದೆ.

ಮಳೆಯ ನಿರೀಕ್ಷೆಯಲ್ಲಿರುವ ರೈತರು.. ಉತ್ತಮ ಬೆಳೆಯ ಭರವಸೆಯೊಂದಿಗೆ ಭೂಮಿತಾಯಿಗೆ ಸಲ್ಲಿಸಿದ ಗೌರವ..!

ಮಳೆ ಕೈಕೊಟ್ಟರೂ ಸಂಪ್ರದಾಯವನ್ನು ಕೈಬಿಡದೆ, ಭೂಮಿಯೊಂದಿಗೆ ತಮ್ಮ ಭಾವನಾತ್ಮಕ ಸಂಬಂಧವನ್ನು ಸೀಗೆ ಹುಣ್ಣಿಮೆ ಮೂಲಕ ರೈತರು ಸಾರಿದ್ದಾರೆ.

ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಣ್ಣಿನ ಸೊಗಡು, ರೈತರ ಒಗ್ಗಟ್ಟು ಹಾಗೂ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಈ ಹಬ್ಬ, ಭೂಮಿತಾಯಿಯ ಮೇಲಿನ ಗೌರವಕ್ಕೆ ಸಾಕ್ಷಿಯಾಗಿದೇ.

ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author