ರಾಜ್ಕುಮಾರ್ ಹಿರಾನಿ ನಿರ್ದೇಶನದ, ಆಮೀರ್ ಖಾನ್ ಅಭಿನಯದ ‘3 ಇಡಿಯಟ್ಸ್’ ಕೇವಲ ಒಂದು ಸಿನಿಮಾ ಅಲ್ಲ, ಅದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವ ಒಂದು ಎಮೋಷನ್. ಈಗ ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಹಿರಾನಿ ಅವರು ಈ ಸೂಪರ್ ಹಿಟ್ ಚಿತ್ರದ ಸೀಕ್ವೆಲ್ಗಾಗಿ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಆಮೀರ್ ಖಾನ್ ಕೂಡ ಇತ್ತೀಚಿನ ಸಂದರ್ಶನವೊಂದರಲ್ಲಿ ಸೀಕ್ವೆಲ್ ಬಗ್ಗೆ ಪಾಸಿಟಿವ್ ಸಿಗ್ನಲ್ ನೀಡಿದ್ದರು.
ಈ ಸೀಕ್ವೆಲ್ನ ಅತಿದೊಡ್ಡ ಟ್ವಿಸ್ಟ್ ಎಂದರೆ ‘ನಾಲ್ಕನೇ ಇಡಿಯಟ್’ ಎಂಟ್ರಿ. ವರದಿಗಳ ಪ್ರಕಾರ, ಈ ಹೊಸ ಪಾತ್ರಕ್ಕಾಗಿ ಹಿರಾನಿ ಅವರ ನೆಚ್ಚಿನ ನಟ ವಿಕ್ಕಿ ಕೌಶಲ್ ಅವರನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಹಿರಾನಿ ಜೊತೆ ‘ಸಂಜು’ ಮತ್ತು ‘ಡಂಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ ವಿಕ್ಕಿ, ಈ ಮೆಗಾ ಪ್ರಾಜೆಕ್ಟ್ನಲ್ಲಿ ಮತ್ತೆ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ಜೋರಾಗಿದೆ. ಪ್ರಾಥಮಿಕ ಹಂತದ ಮಾತುಕತೆ ಕೂಡ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಕಥೆಯ ಹಂದರ ಈ ಬಾರಿ ಇನ್ನೂ ರೋಚಕವಾಗಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಸಿನಿಮಾದ ಘಟನೆಗಳ ಸುಮಾರು 10 ವರ್ಷಗಳ ನಂತರ, ಆಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರ ಪಾತ್ರಗಳ ಜೀವನ ಹೇಗೆ ಬದಲಾಗಿದೆ ಮತ್ತು ಆ ಲೈಫ್ಗೆ ಹೊಸ ‘ಇಡಿಯಟ್’ ಎಂಟ್ರಿಯಾದರೆ ಯಾವ ರೀತಿಯ ಕಾಮಿಡಿ ಹಾಗೂ ಕಾನ್ಫ್ಲಿಕ್ಟ್ ಮೂಡುತ್ತದೆ ಎಂಬುದೇ ಈ ಭಾಗದ ಹೈಲೈಟ್ ಆಗಲಿದೆ.
ರಾಜ್ಕುಮಾರ್ ಹಿರಾನಿ ಮತ್ತು ಸಹಲೇಖಕ ಅಭಿಜಾತ್ ಜೋಶಿ ಪ್ರಸ್ತುತ ಸ್ಕ್ರಿಪ್ಟ್ನ್ನು ಫೈನಲ್ ಮಾಡುವ ಹಂತದಲ್ಲಿದ್ದು, 2027ರ ವೇಳೆಗೆ ಚಿತ್ರೀಕರಣ ಆರಂಭಿಸುವ ಯೋಜನೆ ಇದೆ ಎಂದು ತಿಳಿದುಬಂದಿದೆ. ಹಳೆಯ ತಂಡಕ್ಕೆ ಹೊಸ ತಾರೆ ಸೇರ್ಪಡೆಯಾಗುತ್ತಿರುವ ಈ ಬೆಳವಣಿಗೆ ಬಾಲಿವುಡ್ನಲ್ಲಿ ಈಗಾಗಲೇ ದೊಡ್ಡ ಸಂಚಲನ ಸೃಷ್ಟಿಸಿದೆ. ಒಟ್ಟಾರೆ, ವಿಕ್ಕಿ ಕೌಶಲ್ ಈ ಗ್ಯಾಂಗ್ಗೆ ಸೇರಿದರೆ ‘3 ಇಡಿಯಟ್ಸ್’ ಹೈಪ್ ಮತ್ತೊಂದು ಲೆವೆಲ್ಗೆ ಹೋಗುವುದು ಖಚಿತ ಎಂದು ಸಿನಿಪ್ರೇಮಿಗಳು ಅಭಿಪ್ರಾಯಪಡುತ್ತಿದ್ದಾರೆ.




