ನಿತ್ಯದ ಅಡುಗೆ ಮನೆಯ ಪ್ರಮುಖ ಪದಾರ್ಥವಾಗಿರುವ ತೊಗರಿಬೇಳೆ ಬೆಲೆ ಈಗ ಜನಸಾಮಾನ್ಯರಿಗೆ ಬಿಗ್ ಶಾಕ್ ನೀಡಿದೆ. ಮಳೆ ಕೊರತೆಯ ಕಾರಣದಿಂದ ತೊಗರಿ ಇಳುವರಿ ಗಣನೀಯವಾಗಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ತೊಗರಿಬೇಳೆ ಬೆಲೆ ಗಗನಮುಖಿಯಾಗಿದೆ. ಹಬ್ಬದ ಸಮಯ ಸಮೀಪಿಸುತ್ತಿರುವ ಈ ವೇಳೆಯೇ ಬೆಲೆ ಏರಿಕೆಯಾಗಿರುವುದು ಬಡ ಹಾಗೂ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬಿದ್ದಂತಾಗಿದೆ ಅಂತ ಹೇಳಬಹುದು.
ಎಸ್ ‘ದೇಶದ ತೊಗರಿ ಕಣಜ ಎಂದೇ ಕರೆಯಲ್ಪಡುವ ಕಲಬುರಗಿ ಮಾರುಕಟ್ಟೆಯಲ್ಲಿ ತೊಗರಿಕಾಳಿನ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಈ ತಿಂಗಳ ಆರಂಭದಲ್ಲಿ ಕ್ವಿಂಟಲ್ಗೆ ಎಂಟು ಸಾವಿರದಿಂದ ಎಂಟು ಸಾವಿರದ ಐದು ನೂರು ರೂಪಾಯಿ ಇದ್ದ ತೊಗರಿಕಾಳು ಬೆಲೆ, ಈಗ ಒಂಬತ್ತು ಸಾವಿರದಿಂದ ಒಂಬತ್ತು ಸಾವಿರದ ಐದು ನೂರು ರೂಪಾಯಿಗಳಿಗೆ ಏರಿಕೆಯಾಗಿದೆ.
ಇನ್ನು ಬೆಂಗಳೂರು ಸಗಟು ಮಾರುಕಟ್ಟೆಯಲ್ಲೂ ತೊಗರಿಬೇಳೆ ದರ ಕೆಜಿಗೆ ಎಂಟು ರೂ. ನಿಂದ ಹತ್ತು ರೂಪಾಯಿಯವರೆಗೆ ಹೆಚ್ಚಾಗಿದೆ. ಸಗಟು ದರದಲ್ಲೇ ಏರಿಕೆಯಾಗಿರುವುದರಿಂದ, ಚಿಲ್ಲರೆ ಮಾರುಕಟ್ಟೆಯಲ್ಲಿ ತೊಗರಿಬೇಳೆಯನ್ನು ಕೆಜಿಗೆ 150 ರಿಂದ 160 ರೂಪಾಯಿಗಳ ವರೆಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಆದರೂ ಈ ಬೆಲೆ ಏರಿಕೆಯ ಸಂಪೂರ್ಣ ಲಾಭ ರೈತರಿಗೆ ಸಿಗುತ್ತಿಲ್ಲ ಎಂಬುದು ದುರಂತ. ಕಳೆದ ವರ್ಷ ಪ್ರವಾಹ ಮತ್ತು ನೆಟೆರೋಗ ಹಾಗೂ ಈ ಬಾರಿ ಮಳೆ ಇಲ್ಲದೆ ಬೆಳೆ ಬಾಡಿಹೋಗಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ 16 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದರೂ, ಮಳೆ ಅಭಾವದಿಂದ ನಿರೀಕ್ಷಿತ ಇಳುವರಿ ಬರುವುದು ಕಷ್ಟವಾಗಿದೆ. ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.




