Saturday, April 12, 2025

Latest Posts

Bengaluru News: ಎಎಐ ಸ್ಥಳ ಪರಿಶೀಲನೆ : ಈ ಜಾಗದಲ್ಲಿಯೇ 2ನೇ ಏರ್‌ ಪೋರ್ಟ್‌..!

- Advertisement -

Bengaluru News: ತೀವ್ರ ಕುತೂಹಲ ಹಾಗೂ ಪ್ರತಿಷ್ಠೆಯ ವಿಚಾರವಾಗಿರುವ ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಎಎಐ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಈಗಾಗಲೇ ಗೊತ್ತು ಮಾಡಿರುವ ಮೂರು ಸ್ಥಳಗಳ ಪೈಕಿ 2ರ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇನ್ನೂ ಪ್ರಮುಖವಾಗಿ ನಗರದಲ್ಲಿ ಎರಡನೇಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ, ಚೂಡಹಳ್ಳಿ ಮತ್ತು ನೆಲಮಂಗಲದ ಕುಣಿಗಲ್‌ ರಸ್ತೆಯಲ್ಲಿ ಸ್ಥಳ ಗುರುತಿಸಲಾಗಿದೆ.

ಅಲ್ಲದೆ ಈ ಮೂರು ಜಾಗಗಳಲ್ಲಿ ಯಾವುದು ವಿಮಾನ ನಿಲ್ದಾಣಕ್ಕೆ ಸೂಕ್ತವಾಗುತ್ತದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಎಎಐ ಅಧಿಕಾರಿಗಳ ತಂಡವು ಕನಕಪುರದ ರಸ್ತೆಯಲ್ಲಿ ಗುರುತು ಮಾಡಲಾಗಿರುವ ಎರಡೂ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದೆ. ಅಂದಹಾಗೆ ನೆಲಮಂಗಲದ ಕುಣಿಗಲ್‌ ರಸ್ತೆಯ ಪಕ್ಕದಲ್ಲಿರುವ ಜಾಗದ ಅಧ್ಯಯನ ಮಾಡಿದೆ.

ಈ ಎಲ್ಲ ಸ್ಥಳಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿರುವ ವರದಿಯನ್ನು ದೆಹಲಿಗೆ ತೆರಳಿದ ಬಳಿಕ ಇಡೀ ತಂಡವು ಕೂಲಂಕುಷವಾಗಿ ಅವಲೋಕನ ಮಾಡಲಿದೆ. ಬಳಿಕ ಯಾವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಸೂಕ್ತವಾಗುತ್ತದೆ ಎನ್ನುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇದಾದ ಬಳಿಕ ತಮ್ಮ ಅಧ್ಯಯನದ ವರದಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ನಂತರವೇ ವಿಮಾನ ನಿಲ್ದಾಣದ ಕಾರ್ಯ ಚಟುವಟಿಕೆಗಳು ವೇಗ ಪಡೆಯಲಿವೆ.

ಸರ್ಕಾರದಿಂದ ಎಎಐಗೆ 1.2 ಕೋಟಿ ರೂಪಾಐಿ ಪಾವತಿ..

ಇನ್ನೂ ಈ ಎರಡನೇ ವಿಮಾನ ನಿಲ್ದಾಣ ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವು ಎಎಐಗೆ 1.2 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸಿದೆ. ಈ ಹಣವನ್ನು ಬಳಸಿಕೊಂಡು ತಾಂತ್ರಿಕ, ಭೌಗೋಳಿಕ, ಮತ್ತು ಪೌರ ಸೌಲಭ್ಯ ಸಂಬಂಧಿತ ಅಂಶಗಳ ಸಮೀಕ್ಷೆ ನಡೆಯುತ್ತಿದೆ. ಭೂಮಿಯ ಸ್ಥಿತಿ, ರಸ್ತಾ ಸಂಪರ್ಕ, ಪ್ರವಾಹ ಭೀತಿ, ಪರಿಸರ ಪರಿಣಾಮ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಎಐ ತೀರ್ಮಾನ ಕೈಗೊಳ್ಳಲಿದೆ.

ಸಿರಾದಲ್ಲೇ ಏರ್‌ ಪೋರ್ಟ್‌ ಮಾಡಿ..

ಉತ್ತರ ಕರ್ನಾಟಕ ಮತ್ತು ಬಯಲುಸೀಮೆ ಭಾಗದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘವಾಗಿ ಈ ಪತ್ರವನ್ನು ಬರೆದು ಲಾಬಿ ನಡೆಸಿದ್ದಾರೆ. ಕನಕಪುರ , ನೆಲಮಂಗಲದಲ್ಲಿ ಏರ್‌ ಪೋರ್ಟ್‌ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬದಲಾಗಿ ಸಿರಾದಲ್ಲೇ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡಿ ಎಂದು 30 ಕ್ಕೂ ಹೆಚ್ಚು ಶಾಸಕರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದರಿಂದ ಬಯಲುಸೀಮೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂಬುವುದು ಇವರ ವಾದವಾಗಿದೆ. ಸಿರಾದಲ್ಲಿ ಚೆನ್ನೈ-ಮುಂಬೈ ಹೆದ್ದಾರಿ ಹಾದು ಹೋಗಿದೆ. ಎಚ್‌ಎಎಲ್‌ನಂತಹ ರಕ್ಷಣಾ ಸಂಸ್ಥೆ ಇದೆ. ಅತೀದೊಡ್ಡ ವಸಂತನರಸಾಪುರ ಕೈಗಾರಿಕಾ ವಸಾಹತು ಶೀಘ್ರದಲ್ಲೇ ಜಪಾನ್ ಟೌನ್‌ಶಿಪ್ ಕೂಡ ನಿರ್ಮಾಣ ಆಗ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆಗುತ್ತಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ನೀರಾವರಿ ಸೌಲಭ್ಯ ಇದೆ. ತುಮಕೂರು-ರಾಯದುರ್ಗ ರೈಲ್ವೇ ಮಾರ್ಗ ಕೂಡ ಹಾದು ಹೋಗಲಿದೆ. ಹೀಗಿರುವಾಗ ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರಿನಲ್ಲಿ ಅರ್ಧದಷ್ಟು ಟ್ರಾಫಿಕ್ ದಟ್ಟಣೆ ಕಡಿಮೆ ಆಗಲಿದೆ ಎನ್ನುವುದು ಈ ಶಾಸಕರ ವಾದವಾಗಿದೆ.

- Advertisement -

Latest Posts

Don't Miss