Saturday, April 19, 2025

Latest Posts

Bengaluru News: ನಕಲಿ ವೈದ್ಯರೆಷ್ಟು ಗೊತ್ತಾ..? : ಬೆಚ್ಚಿ ಬೀಳಿಸುತ್ತೆ ಈ ಮಾಹಿತಿ

- Advertisement -

Bengaluru News: ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳು, ಬದಲಾವಣೆಗಳಾದರೂ ಸಹ ಆರೋಗ್ಯ ಕ್ಷೇತ್ರಕ್ಕೆ ಒಂದಲ್ಲ ಒಂದು ರೀತಿಯ ಕಳಂಕ ಅಂಟಿಕೊಳ್ಳುತ್ತಲೇ ಇದೆ. ಇನ್ನೂ ರಾಜ್ಯಾದ್ಯಂತ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಲ್ಲದೆ ಇದರಿಂದ ಜನರ ಆರೋಗ್ಯದ ಮೇಲೂ ಅನೇಕ ರೀತಿಯ ಮಾರಕ ಪರಿಣಾಮಗಳು ಬೀರುತ್ತಿವೆ. ಇನ್ನೂ ಇದಕ್ಕೆ ಪೂರಕವೆಂಬಂತೆ ಕಳೆದ ಒಂದು ವರ್ಷದಲ್ಲಿ ರಾಜ್ಯದ ಹಲವೆಡೆ 623 ನಕಲಿ ವೈದ್ಯರನ್ನು ಆರೋಗ್ಯ ಇಲಾಖೆಯು ಪತ್ತೆ ಹಚ್ಚಿದೆ.

ಇನ್ನೂ ಪ್ರಮುಖವಾಗಿ ಆರೋಗ್ಯ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಇಲಾಖೆಯು ಅನೇಕ ಕ್ರಮ ಕೈಗೊಂಡಿದ್ದರೂ ಸಹ ಅಲ್ಲಲ್ಲಿ ಈ ನಕಲಿ ವೈದ್ಯರು ತಮ್ಮ ಉಪಟಳ ಮುಂದುವರೆಸಿದ್ದಾರೆ. ಅಲ್ಲದೆ ಈ ನಕಲಿ ವೈದ್ಯರು ನೀಡುವ ಅವೈಜ್ಞಾನಿಕ ಚಿಕಿತ್ಸೆಯಿಂದ ಸಣ್ಣ ಸಮಸ್ಯೆಯು ದೊಡ್ಡದಾಗಿ ಪರಿಣಮಿಸುವ ಆತಂಕ ಹೆಚ್ಚಾಗಿದೆ. ಅಲ್ಲದೆ ಬರೀ ಬೋರ್ಡ್‌ ನೋಡಿದರೆ ಸಾಕು..! ಆ ವೈದ್ಯರು ಅಸಲಿಯೋ ಅಥವಾ ನಕಲಿಯೋ ಎನ್ನುವುದನ್ನು ಅರಿಯದ ಬಡ ಜನರು ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ 623 ನಕಲಿ ವೈದ್ಯರು..

ಅಲ್ಲದೆ ಆರೋಗ್ಯ ಇಲಾಖೆಯ ಕೈಗೆ ಸಿಕ್ಕಿಬಿದ್ದಿರುವ 623 ಮಂದಿ ನಕಲಿ ವೈದ್ಯರಲ್ಲಿ 89 ಜನರಿಗೆ ದಂಡ ವಿಧಿಸಲಾಗಿದೆ. ಇನ್ನೂ 163 ಕ್ಲಿನಿಕ್‌ಗಳಿಗೆ ನೋಟಿಸ್‌ ನೀಡಲಾಗಿದೆ, 193 ಆಸ್ಪತ್ರೆಗಳನ್ನು ಮುಚ್ಚಿಸಲಾಗಿದೆ. ಅಂದಹಾಗೆ 142 ಕ್ಲಿನಿಕ್‌ಗಳನ್ನು ಸೀಜ್‌ ಮಾಡಲಾಗಿದೆ. ಇನ್ನೂ ಆರೋಗ್ಯ ವಿಭಾಗದಲ್ಲಿಯೇ ಇರುವ ಆಯುರ್ವೇದದ ಹೆಸರಲ್ಲಿ ನಕಲಿಯಾಗಿ ಇದೇ ಆಯುರ್ವೇದ ಚಿಕಿತ್ಸೆಯ ಹೆಸರಲ್ಲಿ ಜನರಿಂದ ಸಾವಿರಾರು ರೂಪಾಯಿಗಳನ್ನು ದೋಚುತ್ತಿದ್ದ 833 ಕೇಸ್‌ಗಳನ್ನು ದಾಖಲಿಸಲಾಗಿವೆ. ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಈ ನಕಲಿ ವೈದ್ಯರ ಹಾವಳಿ ಇದೆ. ಆದರೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ನಕಲಿ ವೈದ್ಯರು ಕಂಡು ಬಂದಿಲ್ಲ. ಹೀಗಾಗಿ ನಕಲಿ ವೈದ್ಯರ ಪ್ರಕರಣವನ್ನು ಗಂಭೀರವಾಗಿ ಪಡೆದಿರುವ ಆರೋಗ್ಯ ಇಲಾಖೆಯು ಇಂತವರ ಮೇಲೆ ಒಂದು ಕಣ್ಣಿಟ್ಟಿದೆ. ಇನ್ನೂ ಕೋಲಾರ ಹಾಗೂ ತುಮಕೂರಿನಲ್ಲಿ ಅತಿ ಹೆಚ್ಚು ನಕಲಿ ಪತ್ತೆಯಾಗಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದ ಭಾಗದಲ್ಲಿ ಈ ನಕಲಿ ವೈದ್ಯರು ತಮ್ಮ ಅಸ್ತಿತ್ವ ಕಂಡು ಕೊಂಡಿದ್ದಾರೆ. ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಕಲಬುರಗಿ ಭಾಗಗಳಲ್ಲಿಯೂ ಇವರು ಹೆಚ್ಚಾಗಿ ಕಂಡು ಬರುತ್ತಾರೆ.

ನಕಲಿ ವೈದ್ಯರ ಪತ್ತೆ ಹೇಗೆ..?

ಇನ್ನೂ ನಕಲಿ ವೈದ್ಯರನ್ನು ಯಾವ ಮಾನದಂಡದಲ್ಲಿ ಗುರುತಿಸಲಾಗುತ್ತದೆ ಎನ್ನುವುದನ್ನು ನೋಡಿದಾಗ, ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ಅಂದರೆ ಕೆಎಂಸಿ ಅಡಿಯಲ್ಲಿ ನೋಂದಣಿ ಮಾಡಿಸಿದ ಬಳಿಕವೇ ಎಂಬಿಬಿಎಸ್‌ ಪೂರ್ಣಗೊಳಿಸಿದ ವೈದ್ಯರಿಗೆ ಪ್ರಮಾಣ ಪತ್ರ ದೊರೆಯುತ್ತದೆ. ಅಲ್ಲದೆ ವೈದ್ಯರು ತಮ್ಮ ತಮ್ಮ ಕ್ಲಿನಿಕ್‌ಗಳಲ್ಲಿ ಈ ಕೆಎಂಸಿ ಪ್ರಮಾನ ಪತ್ರ ಪ್ರದರ್ಶಿಸಬೇಕು. ಇಷ್ಟೇ ಅಲ್ಲದೆ ಅವರು ಬರೆಯುವ ಔಷಧ ಚೀಟಿಗಳಲ್ಲೂ ಈ ಕೆಎಂಸಿ ರಿಜಿಸ್ಟ್ರೇಶನ್ ನಂಬರ್‌‌ ನಮೂದಾಗಿರಬೇಕು. ವೈದ್ಯಕೀಯಕ್ಕೆ ಸಂಬಂಧಿಸಿದ ನಿರ್ಧಿಷ್ಟ ದಾಖಲೆಗಳು ಇಲ್ಲದಿದ್ದರೆ ಅವರನ್ನು ನಕಲಿ ವೈದ್ಯರೆಂದು ಪರಿಗಣಿಸಲಾಗುತ್ತದೆ. ಆದರೆ ಇಷ್ಟಲ್ಲಾ ಮಾನದಂಡಗಳಿದ್ದರೂ ಕೂಡ ಇವುಗಳನ್ನು ಉಲ್ಲಂಘಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕ್ಲಿನಿಕ್‌ ನಡೆಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಜಿಲ್ಲಾ ಮಟ್ಟದಲ್ಲಿ ಇರುತ್ತೆ ಸಮಿತಿ..

ಈ ರೀತಿಯ ನಕಲಿ ವೈದ್ಯರಿಗೆ ಬ್ರೇಕ್‌ ಹಾಕಲು ರಾಜ್ಯದಲ್ಲಿ ಪ್ರತಿ ಜಿಲ್ಲಾ ಹಂತದಲ್ಲೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಗಿರುತ್ತದೆ. ಇನ್ನು ಇದಕ್ಕೆ ನೋಂದಣಿ ಹಾಗೂ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರ ಸಮಿತಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಸಮಿತಿಯ ಇತರೆ ಸದಸ್ಯರಾಗಿ ಜಿಲ್ಲಾ ಆಯುಷ್‌ ಅಧಿಕಾರಿ , ಭಾರತೀಯ ವೈದ್ಯಕೀಯ ಸಂಘದ ಓರ್ವ ಸದಸ್ಯ ಹಾಗೂ ಓರ್ವ ಮಹಿಳಾ ಪ್ರತಿನಿಧಿ ಸ್ಥಾನ ಪಡೆದಿರುತ್ತಾರೆ. ಇಷ್ಟೇ ಅಲ್ಲದೆ ತಾಲೂಕಾ ಆರೋಗ್ಯ ಅಧಿಕಾರಿಗಳನ್ನು ಪ್ರಾಧಿಕೃತ ಅಧಿಕಾರಿಗಳಾಗಿ ನೇಮಿಸಲಾಗಿರುತ್ತದೆ. ಇನ್ನೂ ಈ ಪ್ರಾಧಿಕೃತ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸೇರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ನಿಯಮ ಉಲ್ಲಂಘಿಸಿದವರನ್ನು ಗುರುತಿಸಿ ಜಿಲ್ಲಾ ಸಮಿತಿಯಾದ ಕೆ.ಪಿ.ಎಂ.ಇ. ನೋಂದಣಿ ಮತ್ತು ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಈ ವರದಿಯನ್ನು ಆಧರಿಸಿ ಜಿಲ್ಲಾ ಸಮಿತಿಯು ನಿಯಮ ಪಾಲನೆ ಮಾಡಿದ ನಕಲಿ ವೈದ್ಯರು ಅಥವಾ ಕ್ಲಿನಿಕ್‌ಗಳ ವಿಚಾರಣೆ ನಡೆಸುತ್ತದೆ. ಇನ್ನೂ ಇದರಲ್ಲಿ ತಪ್ಪಿತಸ್ಥರೆಂದು ತಿಳಿದ ಮೇಲೆ ಅಂತವರ ವಿರುದ್ಧ ಜಿಲ್ಲಾ ಪ್ರಾಧಿಕಾರವು ಕೆ.ಪಿ.ಎಂ.ಇ ಅಧಿನಿಯಮ 2007ರ ಸೆಕ್ಷನ್‌ 19 /1ಹಾಗೂ ಸೆಕ್ಷನ್‌ 22ರಂತೆ ಕ್ರಮ ಕೈಗೊಳ್ಳುತ್ತದೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಜನ ನಕಲಿ ವೈದ್ಯರು..?

ಇನ್ನೂ ಈ ನಕಲಿ ವೈದ್ಯರು ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಜನರು ಇದ್ದಾರೆ ಎನ್ನುವುದನ್ನು ನೋಡುವುದಾರೆ, ರಾಮನಗರ 1, ಚಿತ್ರದುರ್ಗ 1, ಗದಗ 3, ಉತ್ತರ ಕನ್ನಡ 2, ದಾವಣಗೆರೆ 2, ಚಿಕ್ಕಮಗಳೂರು 2, ಬೆಳಗಾವಿ 3, ಧಾರವಾಡ 5, ಬಳ್ಳಾರಿ 9, ಯಾದಗಿರಿ 11, ಹಾವೇರಿ 12, ಶಿವಮೊಗ್ಗ 14, ಚಾಮರಾಜನಗರ 20, ಬಾಗಲಕೋಟೆ 36, ವಿಜಯಪುರ 30, ಕೊಪ್ಪಳ 33, ರಾಯಚೂರು 49, ವಿಜಯನಗರ 81, ತುಮಕೂರು 84, ಕಲಬುರಗಿ 64, ಉಡುಪಿ 3, ದಕ್ಷಿಣ ಕನ್ನಡ 17, ಕೋಲಾರ 115 ಹಾಗೂ ಬೆಂಗಳೂರು 15 ಜನರು ಹೀಗೆ ರಾಜ್ಯದ ವಿವಿಧೆಡೆ ನಕಲಿ ವೈದ್ಯರು ಪತ್ತೆಯಾಗಿದ್ದಾರೆ.

ಒಟ್ಟಾರೆಯಾಗಿ ಇನ್ನಾದರೂ ನಾವು ವೈದ್ಯರ ಬಳಿ ಹೋಗುವ ಮುನ್ನ ಅವರ ಪೂರ್ವಾಪರ ಮಾಹಿತಿ ಪಡೆಯುವುದು ಸೂಕ್ತ. ಇಲ್ಲವಾದರೆ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆದು ತೊಂದರೆ ಅನುಭವಿಸಬೇಕಾಗುತ್ತದೆ. ವೈದ್ಯರೆಂದರೆ ಅವರು ಅಸಲಿಯಾಗಿದ್ದರೆ ಅವರು ಹಣದ ಕಡೆಗೆ ಗಮನ ಹರಿಸುವುದು ವಿರಳ ಹಾಗೂ ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರ ಚಿಕಿತ್ಸೆ ತಕ್ಷಣಕ್ಕೆ ನಾಟುವುದಿಲ್ಲ, ಆದರೆ ಹೆಲ್ತಿ ಆಗಿರುತ್ತದೆ. ಆದರೆ ಸ್ಟಿರಾಯ್ಡ್‌ಯುಕ್ತ ಔಷಧಗಳನ್ನು. ಇಂಜೆಕ್ಷನ್‌ ನೀಡುವ ವೈದ್ಯರು ಬಹುತೇಕ ನಕಲಿಯಾಗಿರುತ್ತಾರೆ. ಈ ಸ್ಟಿರಾಯ್ಡ್‌ಯುಕ್ತ ಚಿಕಿತ್ಸೆಯು ತಕ್ಷಣಕ್ಕೆ ಆರಾಮದಾಯಕವಾಗಿದ್ದರೂ ಸಹ ದೀರ್ಘಕಾಲದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ನಾವು ಆಸ್ಪತ್ರೆಗಳಿಗೆ ಹೋಗುವ ಮೊದಲು ಆ ವೈದ್ಯರ ಬಗ್ಗೆ ತಿಳಿಯುವುದು ಸೂಕ್ತ.

- Advertisement -

Latest Posts

Don't Miss