Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ, ನಿಶಾ ಜೇಮ್ಸ್ ನೇತೃತ್ವದ ಎಸ್‌ಐಟಿ 2,300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ ಜೀವಾಗೆ ಡಿವೈಎಸ್‌ಪಿ ಕನಕ ಲಕ್ಷ್ಮೀ ಕಿರುಕುಳ ನೀಡಿರುವುದು ಸಾಬೀತಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ಸಾಕ್ಷಿದಾರರ ಹೇಳಿಕೆ, ವೀಡಿಯೋಗಳನ್ನು ಸಾಕ್ಷ್ಯವಾಗಿ ನೀಡಲಾಗಿದೆ.
ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ರಾಘವೇಂದ್ರ ಲೇಔಟ್‌ನ ಮನೆಯೊಂದರಲ್ಲಿ ಡೆತ್ ನೋಟ್ ಬರೆದಿಟ್ಟು, ಕಳೆದ ನವೆಂಬರ್ 22ರಂದು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಡೆತ್ ನೋಟ್‌ನಲ್ಲಿ ಕನಕ ಲಕ್ಷ್ಮೀ ಕೊಟ್ಟ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದರು. ಅಲ್ಲದೇ ಕನಕ ಲಕ್ಷ್ಮೀ 25 ಲಕ್ಷ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರೆಂದು ಕೂಡ ಜೀವಾ ಡೆತ್ ನೋಟ್‌ನಲ್ಲಿ ಬರೆದಿಟ್ಟು, ಸೂಸೈಡ್ ಮಾಡಿಕೊಂಡಿದ್ದರು. ಬಳಿಕ ಜೀವಾ ತಂಗಿ ಸಂಗೀತಾ ಕೊಟ್ಟ ದೂರಿದ ಮೇಲೆ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು.
ನಂತರ ಸಿಬಿಐ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ತಂಡವನ್ನು ಹೈಕೋರ್ಟ್ ರಚಿಸಿತ್ತು. ನಂತರ ಕೆಲವು ವೀಡಿಯೋ ತುಣುಕುಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿಸಿದ್ದರು. ಜೀವಾಳನ್ನು ವಿವಸ್ತ್ರಗೊಳಿಸಿದ ವೀಡಿಯೋ ಸೇರಿ ಕೆಲ ವೀಡಿಯೋಗಳನ್ನು ಡಿಲೀಟ್ ಮಾಡಿಸಲಾಗಿತ್ತು. ಆದರೆ ಪುನಃ ಎಫ್‌ಎಸ್ಎಲ್ ತಜ್ಞರ ಮೂಲಕ ಪರಿಶೀಲನೆ ನಡೆಸಿದಾಗ, ಈ ವೀಡಿಯೋಗಳೆಲ್ಲ ಸಿಕ್ಕಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಡೆತ್ ನೋಟ್‌ನಲ್ಲಿ ಜೀವಾ, ಕನಕ ಲಕ್ಷ್ಮೀ ವಿರುದ್ಧ ಮಾಡಿದ್ದ ಹಲವು ಆರೋಪಗಳು ಸಾಬೀತಾಗಿದೆ ಎಂದು ಹೇಳಲಾಗಿದೆ. ಜೀವಾ ಅವರನ್ನು ವಿವಸ್ತ್ರಗೊಳಿಸಿ, ಬರೀ ದೇಹದ ಮೇಲೆ ಹಲ್ಲೆ ನಡೆಸಿದ್ದು ಸತ್ಯ ಎಂದು ಖುದ್ದು ಕನಕ ಲಕ್ಷ್ಮೀಯೇ ತನಿಖೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಈ ಆಧಾರದ ಮೇಲೆ ವರದಿ ಸಲ್ಲಿಸಲಾಗಿದೆ.
ಕನಕಲಕ್ಷ್ಮೀ ಜೀವಾಗೆ ಕಿರುಕುಳ ನೀಡಲು ಕಾರಣವೇನು..?
ಭೋವಿ ನಿಗಮದಲ್ಲಿ ನಡೆದಿದ್ದ 35 ಕೋಟಿ ರೂಪಾಯಿ ಅಕ್ರಮದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು.ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್‌ಪ್ರೈಸಸ್‌ಗೆ 7.16 ಕೋಟಿ ರೂಪಾಯಿ ಮತ್ತು ಸಹೋದರಿ ಹೆಸರಿನಲ್ಲಿದ್ದ ಹರ್ನಿಕಾ ಕ್ರಿಯೇಷನ್‌ಗೆ 3.79 ಕೋಟಿ ಹಣ ವರ್ಗಾವಣೆಯಾಗಿತ್ತು. ಈ ಪ್ರಕರಣದ ತನಿಖೆಗಾಗಿ ಪೊಲೀಸ್ ಅಧಿಕಾರಿಯಾಗಿದ್ದ ಕನಕ ಲಕ್ಷ್ಮೀಯನ್ನು ನೇಮಿಸಲಾಗಿತ್ತು. ಈ ವೇಳೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಕನಕ ಲಕ್ಷ್ಮೀ, ಜೀವಾಗೆ ಚಿತ್ರಹಿಂಸೆ ನೀಡಿದ್ದಳೆಂದು ಹೇಳಲಾಗಿದೆ.