Hubli News: ಭವಾನಿಶಂಕರ ದೇವಸ್ಥಾನದ ಪುಷ್ಕರಣಿ ವಿವಾದ: ಸಾಮಾನ್ಯ ಸಭೆಯಲ್ಲಿ ಗಲಾಟೆ

Hubli News: ದೇಶದ ಗಮನ ಸೆಳೆದಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಭವಾನಿಶಂಕರ ದೇವಸ್ಥಾನದ ಪುಷ್ಕರಣಿ ವಿವಾದ ಇದೀಗ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿದೆ. ಪುಷ್ಕರಣಿ ಜಾಗದಲ್ಲಿ ರಸ್ತೆ ನಿರ್ಮಾಣ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು, ಮಾತಿನ ಚಕಮಕಿ ತಾರಕಕ್ಕೇರಿದೆ. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದ ಪರಿಣಾಮ ಸಾಮಾನ್ಯ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಭವಾನಿಶಂಕರ ದೇವಸ್ಥಾನದ ಪುಷ್ಕರಣಿ ವಿವಾದ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿದೆ. ಪುಷ್ಕರಣಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಿರುವುದು ಹಾಗೂ ಕಾಮಗಾರಿ ಕೈಗೊಂಡಿರುವ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿದೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ರಾತ್ರೋರಾತ್ರಿ ರಸ್ತೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆಯಿಂದ ಅಧಿಕೃತವಾಗಿ ವರ್ಕ್ ಆರ್ಡರ್ ನೀಡಿದ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಸಮರ್ಥಿಸಿಕೊಂಡರು. ಇದೇ ವಿಚಾರವಾಗಿ ಉಭಯ ಪಕ್ಷದ ಸದಸ್ಯರ ನಡುವಿನ ವಾದ-ಪ್ರತಿವಾದ ತಾರಕಕ್ಕೇರಿತು.

ವಾದ-ವಿವಾದ ತೀವ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಏಕಾಏಕಿ ಪ್ರತಿಭಟನೆಗೆ ಮುಂದಾದರು. “ಬೇಕೆ ಬೇಕು.. ನ್ಯಾಯ ಬೇಕು..” ಎಂದು ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಇದರಿಂದ ಸಾಮಾನ್ಯ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಇನ್ನು ಎರಡು ಪಕ್ಷಗಳ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರ ಮುಂದೆಯೇ ಈ ಗಲಾಟೆ ನಡೆದಿದೆ. ಪುಷ್ಕರಣಿ ವಿವಾದದ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ನಾವು ವರ್ಕ್ ಆರ್ಡರ್ ನೀಡಿದ ಬಳಿಕವೇ ಕಾಮಗಾರಿ ನಡೆಸಿದ್ದೇವೆ ಎಂದು ಕಾಂಗ್ರೆಸ್ ಸದಸ್ಯರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ… ಹಳೇ ಹುಬ್ಬಳ್ಳಿಯ ಭವಾನಿಶಂಕರ ದೇವಸ್ಥಾನದ ಪುಷ್ಕರಣಿ ವಿವಾದ ಇದೀಗ ಬೀದಿಯಿಂದ ಪಾಲಿಕೆ ಸಾಮಾನ್ಯ ಸಭೆಯವರೆಗೂ ತಲುಪಿದೆ. ಒಂದೆಡೆ ರಸ್ತೆ ನಿರ್ಮಾಣದ ವಿರುದ್ಧ ಬಿಜೆಪಿ ಸದಸ್ಯರ ಆಕ್ರೋಶ.. ಮತ್ತೊಂದೆಡೆ ವರ್ಕ್ ಆರ್ಡರ್ ಆಧಾರದ ಮೇಲೆ ಕಾಮಗಾರಿ ನಡೆಸಲಾಗಿದೆ ಎಂಬ ಕಾಂಗ್ರೆಸ್ ಸದಸ್ಯರ ಸಮರ್ಥನೆ.. ಈ ವಾದ-ಪ್ರತಿವಾದದ ನಡುವೆ ಸಾಮಾನ್ಯ ಸಭೆ ಗಲಾಟೆಗೆ ಸಾಕ್ಷಿಯಾಗಿದ್ದು, ಪುಷ್ಕರಣಿ ವಿವಾದ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

About The Author