ಒಂದು ಮರ ಕೂಡ ಕಡಿಯಬಾರದು – ‘ಬಿಡದಿ’ ಯೋಜನೆಗೆ ಬಿಗ್ ವಾರ್ನಿಂಗ್!

ಬೆಂಗಳೂರು ಹೊರವಲಯದ ಬಿಡದಿ ಟೌನ್​ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದ ಭೂಸ್ವಾಧೀನ ವಿವಾದದಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅತ್ಯಂತ ಖಡಕ್ ಆದೇಶವನ್ನು ಹೊರಡಿಸಿದೆ. ರೈತರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕೋರ್ಟ್ ಅನುಮತಿ ಇಲ್ಲದೆ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದೆ.

ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗಾಗಿ ಸುಮಾರು 516 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದನ್ನು ಪ್ರಶ್ನಿಸಿ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರ ಏಕಸದಸ್ಯ ಪೀಠ, ‘ಕೋರ್ಟ್ ಅನುಮತಿ ಇಲ್ಲದೆ ಒಂದು ಇಟ್ಟಿಗೆಯೂ ಅಲುಗಾಡುವಂತಿಲ್ಲ ಹಾಗೂ ಒಂದು ಮರವನ್ನು ಕೂಡ ಕಡಿಯುವ ಹಾಗಿಲ್ಲ’ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.

ಇನ್ನು ಇದರ ಜೊತೆಗೆ ‘ಪರಿಹಾರ ಪ್ರಕಟವಾಯಿತು ಮಾತ್ರಕ್ಕೆ ಕೃಷಿಕರ ವಿರುದ್ಧ ರಾತ್ರೋರಾತ್ರಿ ಬಲ್ಡೋಜರ್ ಬಳಸಿ ಆಸ್ತಿ ನಾಶಪಡಿಸುವ ಕೆಲಸಕ್ಕೆ ಕೈಹಾಕಬಾರದು ಎಂದು ಹೈಕೋರ್ಟ್ ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ. ಇನ್ನು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಾಕಷ್ಟು ರೈತರು ಭೂಮಿ ನೀಡಲು ಮುಂದೆ ಬಂದಿದ್ದಾರೆ ಎಂಬ ಸರ್ಕಾರದ ವಾದವನ್ನು ವಿರೋಧಿಸಿದ್ದಾರೆ. ಮತ್ತೊಂದೆಡೆ, ಕೃಷಿಕರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂದು ಜಿಬಿಡಿಎ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬೆಂಗಳೂರಿನ ಮೇಲಿನ ಜನಸಂಖ್ಯೆಯ ಒತ್ತಡ ಕಡಿಮೆ ಮಾಡಲು ರೂಪಿಸಲಾದ ಈ ಮಹತ್ವಾಕಾಂಕ್ಷಿ ಬಿಡದಿ ಸ್ಮಾರ್ಟ್ ಸಿಟಿ ಯೋಜನೆಯು ಈಗ ಕಾನೂನು ತೊಡಕಿಗೆ ಸಿಲುಕಿದೆ. ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಯಾವ ಮಹತ್ವದ ತೀರ್ಪು ಹೊರಬರಲಿದೆ ಎಂಬುದಾಗಿ ಎದುರು ನೋಡಬೇಕಾದ ವಾತಾವರಣ ನಿರ್ಮಾಣ ಆಗಿದೆ.

About The Author