Sandalwood News: ಅಕ್ರಮವಾಗಿ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾರಾವ್‌ಗೆ ಸಂಕಷ್ಟ ಎದುರಾಗಿದ್ದು, ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಇದೀಗ ಸಿಬಿಐ ಎಂಟ್ರಿ ಕೊಟ್ಟಿದೆ. ಅಲ್ಲದೆ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಸಿಬಿಐ ತನಿಖೆ ಆರಂಭ ಮಾಡಿದೆ.ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಐ ಅಧಿಕಾರಿಗಳ ಮಾಹಿತಿಯನ್ನು ಆಧರಿಸಿ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ.
ಏರ್ಪೋಟ್‌ನಲ್ಲಿ ಬಂಧನವಾಗಿದ್ದ ನಟಿ..
ಇತ್ತೀಚಿಗಷ್ಟೇ ದುಬೈನಿಂದ ಆಗಮಿಸಿದ್ದ ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬೆಂಗಳೂರು ಏರ್‌ಪೋರ್ಟ್ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಡಿಆರ್‌ಐ ಅಧಿಕಾರಿಗಳು ಆರೋಪಿ ವಿಚಾರಣೆ ನಡೆಸುತ್ತಿದ್ದಾರೆ. ದುಬೈನಿಂದ 14 ಕೆಜಿಗೂ ಹೆಚ್ಚು ತೂಕದ ಚಿನ್ನವನ್ನು ತೊಡೆಯ ಭಾಗದಲ್ಲಿ ಅಂಟಿಸಿಕೊಂಡು ನಟಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿರುವುದು ಗೊತ್ತಾಗಿತ್ತು. ಅಂದಹಾಗೆ ತನಿಖೆ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು ನಟಿಯ ಮನೆಯಿಂದ 17.29 ಕೋಟಿ ಮೌಲ್ಯದ ಚಿನ್ನ ಮತ್ತು ನಗದನ್ನು ವಶಕ್ಕೆ ಪಡೆದುಕೊಂಡಿದ್ದರು.
ಸದ್ಯ, ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದ ನಟಿ ರನ್ಯಾ ರಾವ್‌ಳನ್ನು ಡಿಆರ್‌ಐ ಕಸ್ಟಡಿಗೆ ಒಪ್ಪಿಸಿ ಆರ್ಥಿಕ ಅಪರಾಧಗಳ ನ್ಯಾಯಾಲಯ ಕಳೆದ ಶುಕ್ರವಾರ ಆದೇಶ ನೀಡಿತ್ತು. ಮೂರು ದಿನಗಳ ಕಾಲ ಅವರನ್ನು ಡಿಆರ್‌ಐ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ತೀವ್ರಗೊಂಡಿದೆ. ನಟಿ ರನ್ಯಾ ಹೈ ಪ್ರೊಫೈಲ್ ಕುಟುಂಬದವರಾದ್ದರಿಂದ ಅವರಿಗೆ ಹಲವು ಪ್ರಭಾವಿ ವ್ಯಕ್ತಿಗಳ ಜೊತೆ ಸಂಪರ್ಕ ಇರುವ ಸಾಧ್ಯತೆ ಇದೆ. ಅವರ ಮಲತಂದೆ ಡಿಜಿಪಿ ಕೆ. ರಾಮಚಂದ್ರ ರಾವ್. ಹಾಗಾಗಿಯೇ ಅವರು ಚಿನ್ನ ಕಳ್ಳ ಸಾಗಾಣೆ ವೇಳೆ ಹಲವು ಬಾರಿ ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದನ್ನು ತಿಳಿಯಲು ಡಿಆರ್‌ಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಅದರ ಮುಂದುವರೆದ ಭಾಗವಾಗಿ ಸಿಬಿಐ ಪ್ರತ್ಯೇಕವಾದ ಎಪ್ಐಆರ್ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದೆ.