Sunday, September 8, 2024

Latest Posts

ಬಿಜೆಪಿ ಪರವಾಗಿ ರಾಜ್ಯದಲ್ಲಿ ಬಹುದೊಡ್ಡ ಅಲೆ ಎದ್ದಿದೆ – ಸಿಎಂ ಬೊಮ್ಮಾಯಿ

- Advertisement -

ಮೈಸೂರು : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ದೊಡ್ಡ ಅಲೆ ಎದ್ದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅವರು ಇಂದು ಮೈಸೂರಿನಲ್ಲಿ ನಡೆದ ಬಿಜೆಪಿ ವಿಭಾಗ ಮಟ್ಟದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ರವಿಶಂಕರ್ ಅವರು ಅತ್ಯಂತ ಪ್ರಾಮಾಣಿಕರು, ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಬದ್ಧತೆಯಿಂದ 30 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಿದ್ದಾರೆ. ಏಕಸಾಮ್ಯವಿರುವ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಜಾತಿ, ಮತ, ಪಂಥವನ್ನು ಮೀರಿ ಚುನಾವಣೆಯಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಹೊಸ ಚಿಂತನೆಯನ್ನು ಸಾಕಾಗೊಳಿಸಲು ಮುನ್ನುಡಿ ಬರೆಯುವ ಚುನಾವಣೆಯಲ್ಲಿ ಭಾಜಪಕ್ಕೆ ಮತ ಚಲಾಯಿಸಿ, ಬದಲಾವಣೆಯ ಹರಿಕಾರರಾಗಬೇಕು, ನವಕರ್ನಾಟಕದ ನಿರ್ಮಾಪಕರಾಗಬೇಕು. ನವಕರ್ನಾಟಕದಿಂದ ನವ ಭಾರತ ನಿರ್ಮಾಣದ ಕನಸು ನನಸಾಗುತ್ತದೆ. ಆ ನಿಟ್ಟಿನಲ್ಲಿ ರವಿಶಂಕರ್ ಅವರಿಗೆ ಮೊದಲನೇ ಪ್ರಾಶಸ್ತ್ಯದ ಮತವನ್ನು ಹಾಕಬೇಕು ಎಂದರು.

ಮೈಸೂರು ಮುಂದಿನ ಕರ್ನಾಟಕದ ಬೆಳವಣಿಗೆಯ ಗಮ್ಯವಾಗಲಿದೆ

ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಅತ್ಯಂತ ಪ್ರತಿಭಾವಂತ, ಪ್ರಜ್ಞಾವಂತ ನಾಯಕರು, ಜನಪ್ರತಿನಿಧಿಗಳು, ಜನರಿರುವುದು ಮೈಸೂರು ಮಹಾನಗರದಲ್ಲಿ. ಮೈಸೂರಿಗೆ ತನ್ನದೇ ಇತಿಹಾಸವಿದೆ. ಮೈಸೂರಿನ ಅರಸರಾದ ಕೃಷ್ಣರಾಜ ಒಡೆಯರ್ ಅವರನ್ನು ನಾವು ನೆನಸಿಕೊಳ್ಳಬೇಕು. ಅವರು ಹಾಕಿರುವ ಭದ್ರ ಬುನಾದಿಯಿಂದಾಗಿ ಆಧುನಿಕ ಕರ್ನಾಟಕವನ್ನು ಕಟ್ಟಲು ಸಾಧ್ಯವಾಯಿತು. ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು ಸೇರದಂತೆ 500 ಫಾರ್ಚೂನ್ ಕಂಪನಿಗಳ ಪೈಕಿ 400 ಕಂಪನಿಗಳು ಕರ್ನಾಟಕದಲ್ಲಿವೆ. 400 ಅಂತರರಾಷ್ಟ್ರೀಯ ಮಟ್ಟದ ಆರ್. ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ.

ಇದು ಪ್ರಾರಂಭವಾಗಿದ್ದು ಮೈಸೂರಿನಿಂದ . ಕರ್ನಾಟಕದ ಇತಿಹಾಸವನ್ನು ಬರೆಯುವಾಗ ಮೈಸೂರು ಹಾಗೂ ಮೈಸೂರು ಮಹಾರಾಜ ಕೊಡುಗೆ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಆಧುನಿಕ ಕರ್ನಾಕದ ನಿರ್ಮಾಣದಲ್ಲಿ ಸಾಮಾಜಿಕ ಪ್ರಜ್ಞೆ, ಪ್ರಗತಿಪರ ಚಿಂತನೆಯ ಜೊತೆಗೆ ವಿಜ್ಞಾನವನ್ನು ಅಭಿವೃದ್ಧಿಗೊಳಿಸಲಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಕರ್ನಾಟಕದ ಅಭಿವೃದ್ಧಿಯಾಗಬೇಕೆಂದು ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬೆಳಗಾವಿ ಮುಂತಾದ 2 ನೇ ಸ್ತರದ ನಗರಗಳನ್ನು ಗುರುತಿಸಲಾಗಿದೆ. ಬೆಂಗಳೂರಿಗೆ ಸ್ಯಾಟಲೈಟ್ ಟೌನ್‍ಗಳನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಲಾಗಿದೆ.

ಕೌಶಲ್ಯಯುಕ್ತ ಮಾನವಸಂಪನ್ಮೂಲ ನಮ್ಮ ಶಕ್ತಿ

ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಆಯವ್ಯಯದಲ್ಲಿ ಅನುದಾನವನ್ನು ಒದಗಿಸಿ, ಮಂಜೂರು ಮಾಡಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಇಲ್ಲಿ ಬರಬೇಕು. ಕೈಗಾರಿಕೆಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಮೈಸೂರಿಗೆ ಬರಬೇಕು. ಕೈಗಾರಿಕಾ ಟೌನ್‍ಶಿಪ್ ನ್ನು ಇಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕೌಶಲ್ಯಯುಕ್ತ ಮಾನವಸಂಪನ್ಮೂಲ ನಮ್ಮ ಶಕ್ತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಜನಸಂಖ್ಯೆ ನಮ್ಮ ಶಕ್ತಿ ಅದರಲ್ಲೂ ಶೇ 40ರಷ್ಟಿರುವ ಯುವಕರು ನಮ್ಮ ಭವಿಷ್ಯ ಎಂದು ಅರಿತು ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಭಾರತವನ್ನು ವಿಶ್ವದಲ್ಲಿಯೇ ಅತ್ಯಂತ ಗೌರವದಿಂದ ಕಾಣುವಂತೆ ಮಾಡಿದ್ದಾರೆ.

ಪದವೀಧರ ಯುವಕರಿಗೆ ಕೌಶಲ್ಯಾಭಿವೃದ್ಧಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಈ ವರ್ಷ ಸುಮಾರು 1.50 ಲಕ್ಷ ಯುವಕರಿಗೆ ಅತ್ಯಂತ ಆಧುನಿಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ‘ಉದ್ಯಮಿಯಾಗು ಹಾಗೂ ಉದ್ಯೋಗ ನೀಡು’ ಕಾರ್ಯಕ್ರಮವನ್ನು ರೂಪಿಸಿ ಜಾರಿಗೆ ತರಲಾಗಿದೆ. ಆರ್ಥಿಕತೆ ಬೆಳೆಯಲು ಉದ್ಯೋಕಾವಕಾಶಗಳು ಹೆಚ್ಚಾಗಬೇಕು. 6 ಕೋಟಿ ಯುವಕರು ದೇಶದಲ್ಲಿ ಮುದ್ರಾ ಯೋಜನೆಯಿಂದ ಉದ್ಯೋಗಸ್ಥರಾಗಿದ್ದಾರೆ. ಕರ್ನಾಟಕದಲ್ಲಿ 12 ಲಕ್ಷ ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿ 40-50 ಲಕ್ಷ ಜನರಿಗೆ ಉಪಉದ್ಯೋಗವನ್ನು ನೀಡಲಾಗಿದೆ. ಯೋಜನಾಬದ್ಧವಾಗಿ ಕರ್ನಾಟಕವನನು ಮುನ್ನಡೆಸಲಾಗುತ್ತಿದೆ ಎಂದರು.

ದೂರದೃಷ್ಟಿಯ ಕಾರ್ಯಕ್ರಮಗಳು

ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಕರ್ನಾಟಕ. ಮೂರು ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಪದವಿಯನ್ನು ಪಡೆಯಬಹುದಾಗಿದೆ. 21 ನೇ ಶತಮಾನಕ್ಕೆ ಭಾರತಕ್ಕಾಗಿ ಕರ್ನಾಟಕವನ್ನು ಸಿದ್ಧ ಮಾಡಲಾಗುತ್ತಿದೆ. ಇವೆಲ್ಲಾ ದೂರದೃಷ್ಟಿಯಿಂದ ರೂಪಿಸಿರುವ ಕಾರ್ಯಕ್ರಮಗಳಾಗಿವೆ.

21 ನೇ ಶತಮಾನ ಜ್ಞಾನದ ಶತಮಾನ. 7 ಸಾವಿರ ಶಾಲಾ ಕೊಠಡಿಗಳನ್ನು ಒಂದೇ ವರ್ಷದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬದಲಾಗುತ್ತಿರುವ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಶಿಕ್ಷಣಕ್ಕೆ ಮಹತ್ವ, ಹಾಗೂ ಅವಕಾಶಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಆಗ ಮಾತ್ರ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೀರಿ ಎಂಬ ನಂಬಿಕೆ ನನ್ನದು. ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರದ ಪದವೀಧರರು ಜಾಗೃತರಾಗಿದ್ದಾರೆ ಎಂದರು.

- Advertisement -

Latest Posts

Don't Miss