ಸಂಸತ್ ಅಧಿವೇಶನಕ್ಕೂ ಮುನ್ನವೇ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.. ಡಿಸೆಂಬರ್ 15ರೊಳಗೆ ಅಧಿವೇಶನದ ಸಿದ್ಧತೆ ಪೂರ್ಣಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಅಲ್ಲಿಯವರೆಗೆ ವಿದೇಶ ಪ್ರವಾಸಕ್ಕೂ ಬ್ರೇಕ್ ಹಾಕುವಂತೆ ಸೂಚಿಸಿದ್ದಾರೆ ಎಂಬ ವರದಿ ಕುತೂಹಲ ಮೂಡಿಸಿದ್ದು, ಹಾಗಾದ್ರೆ ಈ ಬಾರಿ ಸಂಸತ್ ಅಧಿವೇಶನದಲ್ಲಿ ಏನೆಲ್ಲಾ ನಡೆಯಲಿದೆ ಗೊತ್ತಾ? ಈ ವರದಿಯಲ್ಲಿ ನೋಡೋಣ ಬನ್ನಿ..
ಎಸ್ ‘ಚರ್ಚೆಗಳ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಈ ವಿಷಯ ಪ್ರಸ್ತಾಪಿಸಿದ್ದು, ತಮ್ಮ ತಮ್ಮ ಸಚಿವಾಲಯಗಳು ಅಧಿವೇಶನಕ್ಕೆ ಸಿದ್ಧವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕೇಳಿಕೊಂಡಿದ್ದಾರೆ. ಆಗಸ್ಟ್ 13 ರಂದು ಮಳೆಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ 100ಕ್ಕೂ ಹೆಚ್ಚು ದಿನಗಳಾದರೂ ಔಪಚಾರಿಕವಾಗಿ ಅಧಿವೇಶನ ಕೊನೆಗೊಂಡಿಲ್ಲ ಎಂದು ವಿರೋಧ ಪಕ್ಷಗಳು ವಿಳಂಬದ ಬಗ್ಗೆ ಪ್ರಶ್ನಿಸುತ್ತಿವೆ.
ಈ ಬೆಳವಣಿಗೆಯ ನಡುವೆ, ಡಿಸೆಂಬರ್ 15ರ ಮೊದಲು ಸಂಸತ್ತು ಸಭೆ ಸೇರಿದರೆ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರಗಳ ಸೀಮಾ ನಿರ್ಣಯಕ್ಕೆ ಸಂಬಂಧಿಸಿದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮತ್ತೆ ಪರಿಚಯಿಸುತ್ತದೆಯೇ ಎಂಬ ಚರ್ಚೆ ಶುರುವಾಗಿದೆ. ಏಪ್ರಿಲ್ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಈ ಮಸೂದೆ ಅಗತ್ಯ ಬೆಂಬಲ ಪಡೆಯುವಲ್ಲಿ ವಿಫಲವಾಗಿತ್ತು.
ಪ್ರಸ್ತುತ 540 ಸದಸ್ಯ ಬಲದ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಮೂರನೇ ಎರಡರಷ್ಟು, ಅಂದರೆ ಸುಮಾರು 360 ಮತಗಳ ಅಗತ್ಯವಿದೆ. ಎನ್ಡಿಎ 320 ಸಂಸದರನ್ನು ಹೊಂದಿದ್ದು, ವಿರೋಧ ಪಕ್ಷದಿಂದ 26 ಸಂಸದರು ಹೊರಬಂದ ನಂತರವೂ ಸರ್ಕಾರಕ್ಕೆ ಹೆಚ್ಚುವರಿ ಮತಗಳ ಬೆಂಬಲ ಬೇಕಾಗುತ್ತದೆ. ಹೀಗಾಗಿ ಡಿಎಂಕೆ ಮತ್ತು ಎನ್ಸಿಪಿ ನಡೆ ಮಹತ್ವದ್ದಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದರ ಜೊತೆಗೆ ‘ದಕ್ಷಿಣ ರಾಜ್ಯಗಳ ಕಳವಳ ತಣಿಸಲು, 1971ರ ಜನಗಣತಿಯ ಪಾಲನ್ನು ಉಳಿಸಿಕೊಂಡು ಎಲ್ಲಾ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸುವ ಸೂತ್ರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಸಂಖ್ಯಾಬಲದ ಸವಾಲು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಮುಂಬರುವ ಚಳಿಗಾಲದ ಅಧಿವೇಶನವು ಕೇಂದ್ರ ಸರ್ಕಾರಕ್ಕೆ ಪ್ರಮುಖ ರಾಜಕೀಯ ಮತ್ತು ಶಾಸಕಾಂಗ ಪರೀಕ್ಷೆಯಾಗಲಿದೆ ಎಂದೇ ಹೇಳಬಹುದು..




