ಬಿಹಾರ ಚುನಾವಣೆ ಘೋಷಣೆಯಾಗುವ ಮುನ್ನವೇ, ಬಿಜೆಪಿ ಪಾಲಿಗೆ ಮಿತ್ರಪಕ್ಷಗಳೇ ಬಿಸಿತುಪ್ಪವಾಗುತ್ತಿವೆ. ಸದ್ಯದ ಬೆಳವಣಿಗೆಗಳನ್ನ ನೋಡಿದ್ರೆ 2018ರಲ್ಲಿ ಕರ್ನಾಟಕದಲ್ಲಿ ನಡೆದಿದ್ದ ಸನ್ನಿವೇಶವೇ, ಬಿಹಾರದಲ್ಲಿ ಮರುಕಳಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬಿಹಾರ ಚುನಾವಣೆ ಕುರಿತ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಬಿಹಾರ ಸಿಎಂ ಆಗುವ ಆಕಾಂಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ.
ನಾನು ಬಿಹಾರದ ಸಿಎಂ ಆಗಬೇಕೆಂದು, ನಮ್ಮವರು ಮಹಾತ್ವಾಕಾಂಕ್ಷೆ ಹೊಂದಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ದೊಡ್ಡ ಕನಸುಗಳನ್ನು ಹೊಂದಿದ್ದಾರೆ. ಇದರಲ್ಲಿ ತಪ್ಪೇನಿದೆ. ನಾನು ಬಿಹಾರ ಸರ್ಕಾರದ ಭಾಗವಾಗಿಲ್ಲ ಅಂತಾ ಹೇಳುವ ಮೂಲಕ, ಸಿಎಂ ನಿತೀಶ್ ಕುಮಾರ್‌ಗೆ ಚಿರಾಗ್ ಪಾಸ್ವಾನ್ ಬಿಗ್ ಶಾಕ್ ಕೊಟ್ಟಿದ್ದಾರೆ.
ನಾನು ಅಡುಗೆಯಲ್ಲಿ ಉಪ್ಪು ಇದ್ದಂತೆ. ಬಿಹಾರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ, ಲೋಕ್ ಜನಶಕ್ತಿ ಪಕ್ಷ 20ರಿಂದ 25 ಸಾವಿರ ಮತಗಳನ್ನು ಹೊಂದಿದೆ. ಹೀಗಾಗಿ ನಮ್ಮ ಪಕ್ಷವನ್ನು ಯಾವ ಕ್ಷೇತ್ರದಲ್ಲಿಯೂ ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಮೂಲಕ ಬಿಜೆಪಿ, ಜೆಡಿಯುಗೆ ಚಿರಾಗ್ ಪಾಸ್ವಾನ್ ಖಡಕ್ ಸಂದೇಶ ರವಾನಿಸಿದ್ದಾರೆ.
2018ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷ, 104 ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಪಕ್ಷ 80 ಸ್ಥಾನ ಗೆದ್ದಿತ್ತು. ಜೆಡಿಎಸ್ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು, ಸರ್ಕಾರ ರಚಿಸಿದ್ದವು. ಜೆಡಿಎಸ್ ಪಕ್ಷ ಕಡಿಮೆ ಸ್ಥಾನ ಗೆದ್ದಿದ್ರು, ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ರು. ಇದೇ ರೀತಿ ಬಿಹಾರದಲ್ಲಿ ಅತಂತ್ರ ಫಲಿತಾಂಶ ಬಂದ್ರೆ, ಚಿರಾಗ್ ಪಾಸ್ವಾನ್ ಸಿಎಂ ಆಗುವ ಸಾಧ್ಯತೆಗಳಿವೆ. ಹೀಗಾಗಿ ಬಿಹಾರದ ಹೆಚ್.ಡಿ. ಕುಮಾರಸ್ವಾಮಿ ಆಗಬಹುದು ಎಂದೇ ವಿಶ್ಲೇಷಿಸಲಾಗ್ತಿದೆ.