ರಾಷ್ಟ್ರ ರಾಜಕಾರಣದಲ್ಲಿ ಈಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಸ್ ‘ಕೃಷಿ ಕಾಯ್ದೆಗಳ ವಿರೋಧದ ಹಿನ್ನೆಲೆಯಲ್ಲಿ 2020ರಲ್ಲಿ ಮುರಿದುಬಿದ್ದಿದ್ದ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳದ ಮೈತ್ರಿ, ಆರು ವರ್ಷಗಳ ಬಳಿಕ ಮತ್ತೆ ಒಂದಾಗಿದೆ. ಮುಂಬರುವ 2027ರ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಎರಡೂ ಪಕ್ಷಗಳು ಅಧಿಕೃತ ಘೋಷಣೆ ಮಾಡಿವೆ ಎಂದು ವರದಿಯಾಗಿದೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಕಾಲಿದಳ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಅಕಾಲಿದಳ ಎನ್ಡಿಎಯ ಅತ್ಯಂತ ಹಳೆಯ ಮಿತ್ರಪಕ್ಷವಾಗಿದ್ದು, ಈ ಮೈತ್ರಿ ಹಿಂದೂ-ಸಿಖ್ ಸಹೋದರತ್ವದ ಸಂಕೇತವಾಗಲಿದೆ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.
ಇತ್ತ ಸುಖಬೀರ್ ಸಿಂಗ್ ಬಾದಲ್ ಕೂಡ, ಇದು ಕೇವಲ ರಾಜಕೀಯವಲ್ಲ, ಪಂಜಾಬ್ ಉಳಿಸಲು ವಾಜಪೇಯಿ ಮತ್ತು ಪ್ರಕಾಶ್ ಸಿಂಗ್ ಬಾದಲ್ ಹಾಕಿದ್ದ ಅಡಿಪಾಯದ ಭಾವನಾತ್ಮಕ ಸಂಬಂಧ ಎಂದಿದ್ದಾರೆ. ಇನ್ನು, ಕ್ಷೇತ್ರ ಹಂಚಿಕೆ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಪಂಜಾಬ್ನ ಒಟ್ಟು 117 ಕ್ಷೇತ್ರಗಳಲ್ಲೂ ಮೈತ್ರಿಕೂಟ ಸ್ಪರ್ಧಿಸಲಿದೆ. ಮೈತ್ರಿಯಲ್ಲಿ ಅಕಾಲಿದಳವೇ ದೊಡ್ಡಣ್ಣನ ಸ್ಥಾನದಲ್ಲಿರಲಿದ್ದು, ಮುಖ್ಯಮಂತ್ರಿ ಹುದ್ದೆಯೂ ಅದೇ ಪಕ್ಷಕ್ಕೆ ಸಿಗಲಿದೆ ಎಂಬ ಸುಳಿವನ್ನು ಅಮಿತ್ ಶಾ ನೀಡಿದ್ದಾರೆ.
ಮೂಲಗಳ ಪ್ರಕಾರ, ಈ ಬಾರಿ ಬಿಜೆಪಿ ಸುಮಾರು 40 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದ್ದು, 24 ವರ್ಷಗಳ ಸುದೀರ್ಘ ಮೈತ್ರಿ ಬಳಿಕ 2020ರಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಅಕಾಲಿದಳ ಎನ್ಡಿಎ ತೊರೆದಿತ್ತು. ಪರಿಣಾಮ 2022ರ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಬಿಜೆಪಿ ಕೇವಲ 2 ಮತ್ತು ಅಕಾಲಿದಳ 3 ಸ್ಥಾನಗಳಿಗೆ ಸೀಮಿತವಾಗಿತ್ತು. ಇದೀಗ ಆಪ್ ಸರ್ಕಾರವನ್ನು ಕಿತ್ತೊಗೆಯಲು ಎರಡೂ ಪಕ್ಷಗಳು ಮತ್ತೆ ಒಂದಾಗಿವೆ.
ಒಟ್ಟಿನಲ್ಲಿ, 6 ವರ್ಷಗಳ ಮುನಿಸು ಮರೆತು ಬಿಜೆಪಿ ಮತ್ತು ಅಕಾಲಿದಳ ಮತ್ತೆ ಕೈಜೋಡಿಸಿರುವುದು ಪಂಜಾಬ್ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಹಳೆಯ ಜೋಡಿ 2027ರಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.




