ರಾಜಸ್ಥಾನದ ಕುಚಮನ್‌ನಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆದಿದೆ. ರಮೇಶ್ ರುಲಾನಿಯಾ ಮೇಲೆ ಮೂವರು ಮುಸುಕುಧಾರಿಗಳು ಗುಂಡು ಹಾರಿಸಿ ಪರಾರಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ರಮೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಬೆಳಗ್ಗೆ 5:30ರ ಸುಮಾರಿಗೆ, ಸ್ಟೇಷನ್ ರಸ್ತೆಯಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಮೂವರು ದಾಳಿಕೋರರು ಮುಖವಾಡ ಧರಿಸಿ ಜಿಮ್‌ನ ಎರಡನೇ ಮಹಡಿಗೆ ಪ್ರವೇಶಿಸಿದ್ದಾರೆ. ನಂತರ, ಅವರು ರಮೇಶ್ ಅವರ ಮೇಲೆ ಗುಂಡು ಹಾರಿಸಿ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ರಿಚಾ ತೋಮರ್ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹೆಚ್ಚುವರಿ SP ನೇಮಿಚಂದ್ ಮತ್ತು CO ಅರವಿಂದ್ ಬಿಷ್ಣೋಯ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕಿತರು ಎರಡು ವಿಭಿನ್ನ ವಾಹನಗಳಲ್ಲಿ ಬಂದಿದ್ದು, ದಾಳಿ ಮುಗಿದ ನಂತರ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ಅವರಿಗೆ ಇತ್ತೀಚೆಗಷ್ಟೇ ರೋಹಿತ್ ಗೋದಾರಾ ಗ್ಯಾಂಗ್ ನಿಂದ ಬೆದರಿಕೆ ಕರೆಗಳು ಬಂದಿದ್ದವು ಎಂಬ ಮಾಹಿತಿಯು ಪೊಲೀಸರಿಗೆ ಲಭ್ಯವಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಶಂಕಿತರನ್ನು ಬಂಧಿಸುವವರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಇಡೀ ರಾಜ್ಯದಲ್ಲಿ ಸರ್ಪಗಾವಲಿನಲ್ಲಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ರಾಜ್ಯ ಕಂದಾಯ ಸಚಿವ ವಿಜಯ್ ಚೌಧರಿ ಅವರು ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ಜಾಟ್ ಸಮುದಾಯದ ಜ್ಞಾನರಾಮ್ ರಣವಾನ್ ಅವರು ಮಾತನಾಡಿದ್ದು, ಈ ವಿಷಯದಲ್ಲಿ ಪೊಲೀಸರ ಕಡೆಯಿಂದ ದೊಡ್ಡ ನಿರ್ಲಕ್ಷ್ಯವಿದೆ ಎಂದು ಆರೋಪಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

