ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೊದಲೇ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಮೈತ್ರಿ ಪಕ್ಷಗಳು ಅವರನ್ನು ಅಧಿಕಾರದಿಂದ ದೂರವಿಟ್ಟಿತ್ತು ಅಂತ ಬಿಜೆಪಿಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆಯೇ ಬಿಜೆಪಿ ಪಾಳಯದಲ್ಲಿ ಹೊಸ ಹುರುಪು ಮೂಡಿದೆ. ದೋಸ್ತಿ ವಿರುದ್ಧ ತಮ್ಮ ಆರೋಪ ಮುಂದುವರಿಸಿರೋ ಬಿಜೆಪಿ ಎಂಎಲ್ ಸಿ ಕೋಟಾ ಶ್ರೀನಿವಾಸ ಪೂಜಾರಿ, ಯಡಿಯೂರಪ್ಪನವರು ಈ ಮೊದಲೇ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್-ಜೆಡಿಎಸ್ ಅವರನ್ನು ಅಧಿಕಾರದಿಂದ ದೂರವಿಟ್ಟಿತ್ತು ಎಂದರು. ಇನ್ನು ಬಿಜೆಪಿ ಸರ್ಕಾರ ರಚನೆ ಕುರಿತು ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, 18 ದಿನದ ಕುರುಕ್ಷೇತ್ರ ಮುಗಿದು ಧರ್ಮರಾಯನ ಆಡಳಿತ ರಾಜ್ಯದಲ್ಲಿ ಪ್ರಾರಂಭವಾಗುತ್ತದೆ. ಬಿ.ಎಸ್ ಯಡಿಯೂರಪ್ಪನವರು ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತವನ್ನು ನೀಡುತ್ತಾರೆ ಅಂತ ಇದೇ ವೇಳೆ ಅವರು ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಬಹುಮತ ಪಡೆದುಕೊಂಡು ಮೇಲುಗೈ ಸಾಧಿಸಿರುವ ಬಿಜೆಪಿ, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಿದ್ಧವಾಗಿದ್ದು ಈಗಾಗಲೇ ಪಕ್ಷದ ಮುಖಂಡರೊಂದಿಗೆ ಚರ್ಚೆ ಆರಂಭಿಸಿದೆ. ಇನ್ನು ಬಿಎಸ್ ವೈ ಲೆಕ್ಕಾಚಾರದಂತೆ ನಾಳೆಯೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

